ಗೌರಿ ಹತ್ಯೆ ಪ್ರಕರಣ: ಆರೋಪಿ ನವೀನ್‌ ಕುಮಾರ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2020-01-10 14:23 GMT

ಬೆಂಗಳೂರು, ಜ.10: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ.ನವೀನ್‌ ಕುಮಾರ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಆರೋಪಿ ಕೆ.ಟಿ.ನವೀನ್‌ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ಏಕಸದಸ್ಯ ನ್ಯಾಯಪೀಠ, ಶುಕ್ರವಾರ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

2018ರ ಫೆ.16ರಂದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನವೀನ್‌ ನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ನಾಡ ಪಿಸ್ತೂಲ್ ಹಾಗೂ ಪಾಯಿಂಟ್ 32 ರಿವಾಲ್ವರ್‌ನ ಐದು ಗುಂಡುಗಳನ್ನು ಜಪ್ತಿ ಮಾಡಿದ್ದರು. ಗೌರಿ ಹತ್ಯೆಯಲ್ಲೂ ಕೈವಾಡವಿರಬಹುದು ಎಂಬ ಅನುಮಾನದಡಿ ಎಸ್‌ಐಟಿ ಅಧಿಕಾರಿಗಳು ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ನಡೆಸಿದ್ದರು.

2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಕೊಲೆ ಸೆಪ್ಟೆಂಬರ್ 5ರ ಸಂಜೆ 7.30ರ ಸುಮಾರಿಗೆ ತಮ್ಮ ಲಂಕೇಶ್ ಪತ್ರಿಕೆ ಕಚೇರಿಯಿಂದ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸಕ್ಕೆ ಗೌರಿ ಲಂಕೇಶ್ ಅವರು ಬಂದು, ಕಾರು ನಿಲ್ಲಿಸಿ ಗೇಟನ್ನು ತೆರೆಯುತ್ತಿದ್ದಾಗ ಬೈಕ್ ಮೇಲೆ ಬಂದಿದ್ದ ಹಂತಕರು ಗೌರಿಯ ಮೇಲೆ ಗುಂಡಿನ ಮಳೆ ಸುರಿದಿದ್ದರು. ನಾಲ್ಕು ಗುಂಡುಗಳು ಗೌರಿ ದೇಹವನ್ನು ಹೊಕ್ಕಿದ್ದವು. ಗೌರಿಯವರು ತಪ್ಪಿಸಿಕೊಳ್ಳಲು ಯತ್ನಿಸಿದರೂ, ಹಂತಕರು ಬಿಡದೆ ಗುಂಡಿನ ಸುರಿಮಳೆಗರೆದು ಸ್ಥಳದಲ್ಲಿಯೇ ಗೌರಿಯನ್ನು ಕೊಂದಿದ್ದರು. ಆ ಸಮಯದಲ್ಲಿ ಮನೆಯ ಮುಂದೆ ಬೀದಿ ದೀಪ ಇಲ್ಲದಿದ್ದುದು ಹಂತಕರಿಗೆ ಸಹಾಯವಾಗಿತ್ತು. ಅಲ್ಲದೆ ಹಂತಕ, ಹೆಲ್ಮೆಟ್ ಧರಿಸಿದ್ದರಿಂದ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ. ಮನೆ ಮುಂದಿನ ಸಿಸಿಟಿವಿ ಕ್ಯಾಮೆರಾ ಕೂಡ ಸ್ಪಷ್ಟ ಸಾಕ್ಷ್ಯ ದೊರಕಿಸಿಕೊಟ್ಟಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News