ಮನು ಬಳಿಗಾರ್ ಬಿಜೆಪಿ ಸರಕಾರದ ಕೈಗೊಂಬೆ: ಕುಂ.ವೀರಭದ್ರಪ್ಪ

Update: 2020-01-10 16:44 GMT

ಚಿಕ್ಕಮಗಳೂರು, ಜ.10: ಸರಕಾರದ ಮುಂದೆ ಕಸಾಪವನ್ನು ಮಂಡಿಯೂರುವಂತೆ ಮಾಡಿದ್ದು ಕೇಂದ್ರ ಕಸಾಪ ಅಧ್ಯಕ್ಷ ಮನು ಬಳಿಗಾರ್. ಇದು ಅಘಾತಕಾರಿ ಬೆಳವಣಿಗೆ ಎಂದು ಕುಂ.ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶೃಂಗೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ಸಾಹಿತ್ಯ ಸಮ್ಮೇಳನ ಸಾಹಿತ್ಯದ ಮತ್ತು ರಾಜಕಾರಣದ ಗುಪ್ತಮುಖವನ್ನು ಅನಾವರಣಾಗೊಳಿಸಿದೆ. ಹಣ ನೀಡಿ ಆಶೀರ್ವಾದ ಮಾಡುವ ದೇವರುಗಳನ್ನು ಸಾಹಿತ್ಯ ಎಂದೂ ನಂಬಿಲ್ಲ. ನಂಬುವುದೂ ಇಲ್ಲ. ಸಚಿವರ ಆಜ್ಞೆ ಮೇರೆಗೆ ಕಸಾಪ ಅಧ್ಯಕ್ಷ ಅನುದಾನ ತಡೆ ಹಿಡಿಯುತ್ತಾರೆ. ಸಚಿವರಿಂದ ಪತ್ರ ತರುವಂತೆ ಹೇಳುತ್ತಾರೆಂದರೆ ಅವರ ಉದ್ಧಟತನ ಎಷ್ಟಿರಬೇಡ. ಇದು ಅಘಾತಕಾರಿ ಸನ್ನವೇಶ. ಇಂತಹ ಸನ್ನಿವೇಶದಲ್ಲಿ ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಅಪಾಯವಿದೆ ಎಂದು ಎಚ್ಚರಿಸಿದರು. 

ಆರೆಸ್ಸೆಸ್, ಬಜರಂಗದಳದ ಕಪಿಮುಷ್ಟಿಯಲ್ಲಿ ಬಿಜೆಪಿ ಸರಕಾರವಿದೆ. ಸರಕಾರಕ್ಕೆ ಸರಕಾರ ನೀಡುವ ಹಣ ಅವರಪ್ಪನ ಮನೆ ಖಜಾನೆಯದ್ದಲ್ಲ. ಕನ್ನಡಿಗರ ತೆರಿಗೆ ಹಣ ಉದಾರವಾಗಿ ಕನ್ನಡಕ್ಕೆ ಬಳಕೆಯಾಗಬೇಕು. ಪ್ರತಿಭಟನೆ, ಪ್ರತಿರೋಧ ಸಾಹಿತ್ಯದ ಮೂಲದ್ರವ್ಯ, ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸುವವನೇ ನಿಜವಾದ ಲೇಖಕ. ಸ್ಪಂದಿಸದಿರುವವನು ಲೇಖಕನೇ ಅಲ್ಲ ಎಂದ ಅವರು, ವಿಠಲ್ ಹೆಗ್ಡೆ ಪರಿಸರ ನಾಶ, ಜನ ಸಂಸ್ಕೃತಿ ನಾಶದ ವಿರುದ್ಧ ಚಿಂತಿಸಿ ಹೋರಾಡಿದ, ಧ್ವನಿ ಎತ್ತಿದ ಅಕ್ಷರಗಳ ಮೂಲಕ ನೋವು ಕಟ್ಟಿಕೊಟ್ಟ ನಿಜವಾದ ಸಾಹಿತಿ ಎಂದರು. 

ಸಂಘಪರಿವಾರದವರು ಹೇಳಿದವರನ್ನು ಆಯ್ಕೆ ಮಾಡಬೇಕು, ನಾವು ಹೇಗೆ ಸಮ್ಮೇಳನ ಮಾಡಬೇಕು, ಯಾವ ಬಟ್ಟೆ ತೊಡಬೇಕು, ಏನು ತಿನ್ನಬೇಕು ಎಂದು ಹೇಳುವುದೇ ಪ್ಯಾಸಿಸಂ. ಇದು ಜರ್ಮನಿಯ ಹಿಟ್ಲರ್ ಕಾಲದ ಧೋರಣೆಯಾಗಿದ್ದು, ಇಂತಹ ಪ್ಯಾಸಿಸ್ಟ್ ಸಂಸ್ಕೃ ತಿಗೆ ಭವಿಷ್ಯವೂ ಇಲ್ಲ, ಇತಿಹಾಸವೂ ಇಲ್ಲ ಎಂದರು.

ಪ್ರತಿರೋಧ ಇದ್ದಲ್ಲಿ ಸಾಹಿತ್ಯ ಬೆಳೆಯುತ್ತದೆ, ಇದಕ್ಕೆ ಶೃಂಗೇರಿಯಲ್ಲಿ ಇಂದು ನಡೆದ ಪ್ರತಿಭಟನೆಗಳೇ ಸಾಕ್ಷಿ. ರನ್ನನಿಂದ ಹಿಡಿದು ಕುವೆಂಪು, ಲಂಕೇಶ್‍ವರೆಗೂ ಇಂತಹ ಪ್ರತಿರೋಧ ಇತ್ತು. ಈ ಪ್ರತಿರೋಧವೇ ಸಾಹಿತ್ಯದ ಜೀವಾಳ, ಇದರಿಂದಾಗಿ ಸಾಹಿತ್ಯ ಬೆಳೆಯುತ್ತಿದೆ. ಕುವೆಂಪು, ಪಂಪ ಅವರೆಲ್ಲರೂ ಸರಕಾರ, ಪ್ರಭುತ್ವಗಳ ವಿರುದ್ಧ ಮಾತನಾಡಿದ್ದಾರೆ, ಅವರ ಸಾಹಿತ್ಯ ಓದಿದವರಿಗೆ ಅವರೂ ನಕ್ಸಲೈಟಾ ಎಂಬ ಅನುಮಾನ ಬರುತ್ತದೆ ಎಂದ ಅವರು ಎಡಪಂಥ ಎಂಬುದು ಸಾಹಿತ್ಯ ಬೆಳವಣಿಗೆಗೆ ಪೂರಕವಾದ ಸಿದ್ಧಾಂತವಾಗಿದೆ. ನೊಬೆಲ್ ಗೆದ್ದ ಬಹುತೇಕ ಸಾಧಕರೂ ಎಡಪಂಥದವರೇ, ನೆಲದ ಸಂಕಟ, ತಲ್ಲಣಗಳಿಗೆ ಸ್ಪಂದಿಸುವರೇ ಎಡಪಂಥೀಯರು. ಕಲ್ಕುಳಿ ವಿಠಳ್ ಹೆಗ್ಡೆ ಕಡಿಮೆ ಬರೆದಿದ್ದರೂ ನೆಲದ ತಲ್ಲಣಗಳಿಗೆ ಸ್ಪಂದಿಸಿದ ಚಿಂತಕ, ಹೋರಾಟಗಾರ. ಅವರನ್ನು ವಿರೋಧಿಸುವುದು ಸಂವಿಧಾನ ವಿರೋಧಿಸಿದಂತೆ, ಅವರ ಆಯ್ಕೆ ಪ್ರಜಾತಾತಂತ್ರಿಕವಗಿ ನಡೆದಿದೆ. ಇಂತಹ ಆಯ್ಕೆಯನ್ನು ವಿರೋಧ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದ ಅವರು, ಬಿಜೆಪಿ ಸರಕಾರದ ಜುಟ್ಟು ಇರುವುದು ಆರೆಸ್ಸೆಸ್‍ನ ಕೈಯಲ್ಲಿ. ಇದು ತಪ್ಪಬೇಕು ಎಂದರು.

ಬಿಜೆಪಿ ಸರಕಾರ ಅತಂತ್ರ ಸ್ಥಿತಿಯಲ್ಲಿದೆ. ಈ ಸರಕಾರ ಬಂದಿರುವುದೇ 11 ಅತಂತ್ರ ಶಾಸಕರಿಂದ. ಕಳೆದ ಸರಕಾರದ ತಪ್ಪುಗಳಿಂದಾಗಿ ಬಿಜೆಪಿಗೆ ಅಧಿಕಾರಕ್ಕೆ ಬಂದಿದೆ. ಇಂತಹ ಆತಂಕದಲ್ಲಿರುವ ಸರಕಾರ ಹಾಗೂ ಸಿ.ಟಿ.ರವಿ ಅಧ್ಯಕ್ಷರ ಆಯ್ಕೆ ಯನ್ನು ವಿರೋಧಿಸುವುದು ಆಘಾತಕಾರಿ ಹೇಳಿಕೆ. ಇದನ್ನು ಎಲ್ಲರೂ ಖಂಡಿಸಬೇಕಿದೆ. ಕೇಂದ್ರ ಕಸಾಪ ಅಧ್ಯಕ್ಷ ಸಿಟಿ ರವಿ ಅವರ ಹೇಳಿಕೆಯನ್ನು ಖಂಡಿಸಬೇಕಿತ್ತು. ಆದರೆ ಅವರು ರವಿ ಅಪ್ಪಣೆಯಂತೆ ಅನುದಾನ ತಡೆ ಹಿಡಿದಿರುವುದು ಸರಿಯಲ್ಲ.

ಕೇಂದ್ರ ಸಾಹಿತ್ಯ ಪರಿಷತ್ ಸರಕಾರದ ಕೈಗೊಂಬೆಯಾಗಿರಲಿಲ್ಲ, ಆದರೆ ಐದು ವರ್ಷದ ಅವಧಿಗೆ ತಮ್ಮ ಅಧಿಕಾರವಧಿಯನ್ನು ವಿಸ್ತರಿಸಿಕೊಂಡಿರುವ ಕೇಂದ್ರ ಕಸಾಪ ಅಧ್ಯಕ್ಷ ಮನು ಬಳಿಗಾರ್ ಬಿಜೆಪಿ ಸರಕಾರದ ಕೈಗೊಂಬೆಯಾಗಿದ್ದಾರೆ ಎಂದ ಅವರು, ಸಮ್ಮೇಳನಕ್ಕೆ ನೀಡುವ ಹಣ ರವಿ, ಶೋಭಾ, ಯಡಿಯೂರಪ್ಪಂದೂ ಅಲ್ಲ, ಯಾರಪ್ಪನ ಮನೆಯದ್ದಲ್ಲ ಎಂದರು.

ಕನ್ನಡ ಸಾಹಿತ್ಯಕ್ಕೆ ಇಂತಹ ವಿರೋಧ, ಪ್ರತಿರೋಧ ಅತ್ಯಗತ್ಯ, ಶೃಂಗೇರಿಯ ವಿರೋಧ ಕನ್ನಡಕ್ಕೆ ಯಾವಾಗಲೂ ಅಪಾಯ ಇಲ್ಲ ಎಂಬುದನ್ನು ಸೂಚಿಸುತ್ತಿದೆ ಎಂದು ಅವರು ಇದೇ ವೇಳೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News