ಮೋದಿ ಬಹಳ ಬಿಝಿ, ಸುದ್ದಿಗೋಷ್ಠಿ ನಡೆಸುವಷ್ಟು ಸಮಯ ಇಲ್ಲ: ಸಾಹಿತಿ ಎಸ್.ಎಲ್.ಭೈರಪ್ಪ

Update: 2020-01-10 17:50 GMT

ಮೈಸೂರು,ಜ.10: ಮುಸ್ಲಿಮರನ್ನು ವಿಭಜನೆ ಮಾಡಿ ರಾಜಕಾರಣ ಮಾಡುವ ರೋಗ ಕಾಂಗ್ರೆಸ್‍ ನವರದಾಗಿತ್ತು. ಈಗ ಬಿಜೆಪಿಗೂ ಆ ರೋಗ ಅಂಟಿದೆ ಎಂದು ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಬೇಸರ ವ್ಯಕ್ತಪಡಿಸಿದರು.

ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ರಿಟಿಷರು ಹಿಂದೂ ಮುಸ್ಲಿಮರನ್ನು ವಿಭಜನೆ ಮಾಡುವ ಕೆಲಸವನ್ನು ಈ ಹಿಂದೆಯೇ ಮಾಡಿದ್ದರು. ಆಗ ಜವಹರಲಾಲ್ ನೆಹರು ಮುಸಲ್ಮಾನರನ್ನು ಓಟ್ ಬ್ಯಾಂಕ್‍ಗಾಗಿ ಬಳಸಿಕೊಂಡರು. ಈಗ ಬಿಜೆಪಿ ಕೂಡ ಅಂತಹ ಕೆಲಸವನ್ನು ಮಾಡಲು ಹೊರಟಿದೆ. ಮುಸಲ್ಮಾನರ ಹೆಸರು ರಾಜಕೀಯಕ್ಕೆ ಬಳಕೆಯಾಗುತ್ತಿದೆ ಎಂದು ಹೇಳಿದರು.

ಅನಧಿಕೃತವಾಗಿ ದೇಶದೊಳಗೆ ನುಸುಳಿರುವವರಿಗೆ ಮಾತ್ರ ಪೌರತ್ವ ರದ್ದು ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡ ಹೊರಟಿದೆ. ಅದರಲ್ಲಿ ತಪ್ಪೇನು ? 70 ವರ್ಷಗಳಲ್ಲಿ ಮಾಡಲಾಗದಿದ್ದ ಕೆಲಸವನ್ನು ಬಿಜೆಪಿ ಈಗಲಾದರೂ ಮಾಡಿದೆ. ಅದನ್ನು ಸ್ವಾಗತಿಸಬೇಕೇ ಹೊರತು ಪ್ರಶ್ನಿಸುವ ಕೆಲಸ ಮಾಡಬಾರದು ಎಂದು ಅಭಿಪ್ರಾಯಪಟ್ಟರು.

ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಕೀಳಾಗಿ ನಡೆಸಿಕೊಂಡಿರುವುದಕ್ಕೆ ಅವರು ಇದುವರೆಗೂ ಯಾವ ಸುದ್ದಿಗೋಷ್ಠಿಯನ್ನು ಕರೆದಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮಾಧ್ಯಮಗಳು ಅವರ ಬಗ್ಗೆ ಕೆಟ್ಟ ವರದಿಗಳನ್ನು ಬರೆದವು. ಅದಕ್ಕೆ ಪಾಶ್ಚಿಮಾತ್ಯ ಮಾಧ್ಯಮಗಳೂ ಕೈ ಜೋಡಿಸಿದವು. ಅದರಿಂದ ನೊಂದ ಮೋದಿ, ಮಾಧ್ಯಮಗಳನ್ನು ದೂರ ಇಟ್ಟಿದ್ದಾರೆ. ತಮ್ಮ ವಿಚಾರಗಳನ್ನು ಮನ್ ಕೀ ಬಾತ್ ಮಾದರಿಯ ಕಾರ್ಯಕ್ರಮಗಳ ಮೂಲಕ ಹೊರಹಾಕುತ್ತಿದ್ದಾರೆ ಎಂದು ಹೇಳಿದರು.

ಮೋದಿ ಬಹಳ ಬಿಝಿ ಮನುಷ್ಯ. ಸುದ್ದಿಗೋಷ್ಠಿ ನಡೆಸುವಷ್ಟು ಸಮಯ ಅವರಿಗಿಲ್ಲ. ಅವರನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ಜೊತೆಗೆ ವೈಯಕ್ತಿಕವಾಗಿ ನನಗೆ ಅವರ ಕಾರ್ಯದೊತ್ತಡ ಗೊತ್ತಿದೆ. ಮತ್ತೊಮ್ಮೆ ಅವರು ಪ್ರಧಾನಿಯಾಗುತ್ತಾರೆ ಎಂಬ ಭಯದಿಂದ ಕಾಂಗ್ರೆಸ್ ಕಾಲೆಳೆಯುವ ತಂತ್ರಗಾರಿಕೆ ಹೂಡಿದೆ ಎಂದು ಅಭಿಪ್ರಾಯಿಸಿದರು.

ಕೆಲವರು ಪ್ರಗತಿಪರ ಸಾಹಿತಿಗಳು ಎಂಬ ಹಣೆಪಟ್ಟಿಯನ್ನು ಹಾಕಿಕೊಂಡಿದ್ದಾರೆ. ಸಾಹಿತಿಗೆ ಯಾವುದೇ ತಂತ್ರಗಾರಿಕೆ ಇರಬಾರದು ಎಂದು ಎಡಪಕ್ಷಗಳನ್ನು ಬೆಂಬಲಿಸುವ ಸಾಹಿತಿಗಳನ್ನು ಟೀಕಿಸಿದರು.

ಜೆಎನ್‍ಯು ಘಟನೆ ಬಗ್ಗೆ ಪ್ರಸ್ತಾಪಿಸಿದ ಎಸ್.ಎಲ್.ಬೈರಪ್ಪ, ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡು ಬಗೆಹರಿಸಿಕೊಳ್ಳುವ ಕೆಲಸವನ್ನು ತರಗತಿಯೊಳಗೆ ಮಾಡಬೇಕು. ಅದನ್ನು ಬಿಟ್ಟು ರಾಜಕಾರಣದ ಬಗ್ಗೆ ಬೀದಿಗಿಳಿದು ಪ್ರಶ್ನಿಸಬಾರದು ಎಂದು ಹೇಳಿದರು.

ಜೆಎನ್‍ಯು ವಿದ್ಯಾರ್ಥಿಗಳ ಗೀಳು ದೇಶದ ಇತರ ವಿಶ್ವವಿದ್ಯಾನಿಲಯಗಳಿಗೆ ವ್ಯಾಪಿಸಿದೆ. ಅದರ ಪರಿಣಾಮ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಫ್ರೀ ಕಾಶ್ಮೀರ ಭಿತ್ತಿ ಪತ್ರ ಪ್ರದರ್ಶನಗೊಂಡಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News