×
Ad

ರಾಜ್ಯದ ಸಂಸದರಿಗೆ ಪ್ರಧಾನಿ ಮುಂದೆ ನಿಂತು ಮಾತನಾಡುವ ತಾಕತ್ತು ಇಲ್ಲ: ತೋಂಟದ ಸಿದ್ಧರಾಮ ಸ್ವಾಮೀಜಿ

Update: 2020-01-10 23:10 IST

ಬೆಳಗಾವಿ, ಜ.10: ‘ಪ್ರಧಾನಿ ಮೋದಿಯವರು ಬುದ್ಧಿವಂತರು. ಕೇವಲ ಬುದ್ಧಿವಂತಿಕೆಯಿಂದ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯವಿಲ್ಲ, ಅದರ ಜತೆಗೆ ಹೃದಯವಂತಿಕೆ ಇದ್ದರೆ ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಗದಗದ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ಹೇಳಿಕೆ, ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಮಠಾಧೀಶರ ಸಭೆಯಲ್ಲಿ ಮಾತನಾಡಿದ ಅವರು, ಗಡಿ ವಿವಾದ ಹಾಗೂ ಮಹದಾಯಿ ವಿಚಾರಕ್ಕೆ ಸರಕಾರಗಳ ಮೌನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಇತ್ಯರ್ಥ ಪಡಿಸಬೇಕು: ರಾಜ್ಯದ ಸಂಸದರಿಗೆ ಪ್ರಧಾನಿ ಮೋದಿ ಮುಂದೆ ನಿಂತು ಧೈರ್ಯದಿಂದ ಮಾತನಾಡುವ ತಾಕತ್ತು ಇಲ್ಲ. ಹೀಗಾಗಿ ನಮ್ಮನ್ನು ಅವರ ಬಳಿಗೆ ಕರೆದುಕೊಂಡು ಹೋದರೆ ನಾವೇ ಮಾತನಾಡುತ್ತೇವೆ. ಮಹದಾಯಿ ವಿವಾದವನ್ನು ಕೋರ್ಟ್‌ನ ಹೊರಗೆ ಬಗೆಹರಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಸರಕಾರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರಮಣಕಾರಿ ಧೋರಣೆ ಅನುಸರಿಸುತ್ತಿದೆ. ಆದರೆ, ಈ ಬಗ್ಗೆ ರಾಜ್ಯ ಸರಕಾರ ಮೌನ ವಹಿಸಿದೆ ಎಂದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿಕ್ರಿಯೆ ನೀಡುವುದನ್ನು ಬಿಟ್ಟು ಗಡಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಿರ್ಣಯ: ಗಡಿ ಭಾಗದಲ್ಲಿ ಕನ್ನಡ ಪ್ರಬಲಗೊಳಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಕ್ಕೆ ರಾಜ್ಯದ ಸಂಸದರು ಒತ್ತಡ ಹೇರಬೇಕು. ಒಂದೇ ವೇಳೆ ಇದು ಸಾಧ್ಯವಾಗದೇ ಇದ್ದರೆ ಕೇಂದ್ರ ಸಚಿವರು ರಾಜೀನಾಮೆ ನೀಡಲು ಸಿದ್ಧರಾಗಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News