ಒಮಾನ್ ದೊರೆ ಸುಲ್ತಾನ್ ಖಬೂಸ್ ನಿಧನ

Update: 2020-01-11 15:02 GMT

ಒಮಾನ್ : ಅರಬ್ ಜಗತ್ತಿನ ಸುಧೀರ್ಘ ಅವಧಿಯ ಆಡಳಿತ ನಡೆಸಿದ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಒಮಾನ್  ಸುಲ್ತಾನ್ ಖಬೂಸ್ ಬಿನ್ ಸೈಯದ್ (79) ನಿಧನರಾದರು.

"ತೀವ್ರ ಶೋಕ ಮತ್ತು ವಿಷಾದದಿಂದ ಶುಕ್ರವಾರ ಕೊನೆಯುಸಿರೆಳೆದ ಸುಲ್ತಾನ್ ಖಬೂಸ್ ಬಿನ್ ಸೈಯದ್ ಅವರಿಗೆ ಆಸ್ಥಾನ ಶೋಕ ವ್ಯಕ್ತಪಡಿಸುತ್ತದೆ" ಎಂದು ಅರಮನೆಯ ಪ್ರಕಟಣೆ ಹೇಳಿದೆ.

ಬೆಲ್ಜಿಯಂನಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದ ಅವರು ಕಳೆದ ತಿಂಗಳು ವಾಪಸ್ಸಾಗಿದ್ದರು. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸುಲ್ತಾನ್ ಅವಿವಾಹಿತರಾಗಿದ್ದು ಉತ್ತರಾಧಿಕಾರಿಯನ್ನು ಹೊಂದಿಲ್ಲ ಅಥವಾ ಯಾರನ್ನೂ ಆ ಹುದ್ದೆಗೆ ನೇಮಿಸಿರಲಿಲ್ಲ.

ಅವರ ನಿಧನಕ್ಕೆ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಬ್ರಿಟಿಷರ ನೆರವಿನೊಂದಿಗೆ 1970ರಲ್ಲಿ ರಕ್ತರಹಿತ ಕ್ರಾಂತಿಯಲ್ಲಿ ತಂದೆಯನ್ನು ಪದಚ್ಯುತಗೊಳಿಸಿ ಸುಲ್ತಾನ್ ಅಧಿಕಾರಕ್ಕೇರಿದ್ದರು. ತೈಲ ಸಂಪತ್ತನ್ನು ಬಳಸಿಕೊಂಡು ಒಮನ್ ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಿದ್ದರು.

ಸುಮಾರು 50 ಮಂದಿ ಇರುವ ರಾಜ ಕುಟುಂಬ ಮಂಡಳಿಯ ಪ್ರಕಾರ, ರಾಜ್ಯದ ಪಟ್ಟ ತೆರವಾಗಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಒಳಗಾಗಿ ಹೊಸ ಸುಲ್ತಾನ್‌ರನ್ನು ಆಯ್ಕೆ ಮಾಡಬೇಕಾಗುತ್ತದೆ.

ಕುಟುಂಬ ಒಪ್ಪಿಗೆಗೆ ಬರಲು ಸಾಧ್ಯವಾಗದಿದ್ದರೆ, ರಕ್ಷಣಾ ಮಂಡಳಿಯ ಸದಸ್ಯರು ಮತ್ತು ಸುಪ್ರೀಂ ಕೋರ್ಟ್ ಅಧ್ಯಕ್ಷರು, ರಾಜತಾಂತ್ರಿಕ ಮಂಡಳಿ ಮತ್ತು ರಕ್ಷಣಾ ಮಂಡಳಿಯ ಸದಸ್ಯರು ಸುಲ್ತಾನ್ ಖಬೂಸ್ ಅವರು ತಮ್ಮ ಆಯ್ಕೆಯನ್ನು ದಾಖಲಿಸಿದ ರಹಸ್ಯ ಪತ್ರ ಒಳಗೊಂಡ ಲಕೋಟೆಯನ್ನು ತೆರೆದು ಆ ವ್ಯಕ್ತಿಯನ್ನು ಪಟ್ಟಕ್ಕೆ ತರಲಿದ್ದಾರೆ.

ಸುಲ್ತಾನ್ ಅವರ ಸೋದರ ಸಂಬಂಧಿಗಳಾದ ಸಂಸ್ಕೃತಿ ಸಚಿವ ಹೈತಮ್ ಬಿನ್ ತಾರಿಕ್ ಅಲ್ ಸಯೀದ್, ಉಪ ಪ್ರಧಾನಿ ಅಸಾದ್ ಬಿನ್ ತಾರಿಕ್ ಅಲ್ ಸೈಯದ್ ಮತ್ತು ಒಮನ್‌ನ ನೌಕಾಪಡೆಯ ಮಾಜಿ ಕಮಾಂಡರ್ ಹಾಗೂ ರಾಜಕುಟುಂಬದ ಸಲಹೆಗಾರ ಶಿಹಾಬ್ ಬಿನ್ ತಾರಿಕ್ ಅಲ್ ಸೈಯದ್ ಮೂವರು ಸುಲ್ತಾನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.

ಸೌದಿ, ಇರಾನ್ ಜೊತೆಗಿನ ಸಂಬಂಧದಲ್ಲಿ ಸಮತೋಲನ:

ಎರಡು ಪ್ರಾದೇಶಿಕ ಎದುರಾಳಿಗಳಾದ ಪಶ್ಚಿಮದಲ್ಲಿರುವ ಸೌದಿ ಅರೇಬಿಯ ಮತ್ತು ಉತ್ತರದಲ್ಲಿರುವ ಇರಾನ್ ಜೊತೆಗಿನ ಸಂಬಂಧದಲ್ಲಿ ಒಮಾನ್ ದೊರೆ ಸಮತೋಲನ ಕಾಯ್ದುಕೊಂಡು ಬಂದಿದ್ದರು.

ಒಮಾನ್ ಅಮೆರಿಕ ಮತ್ತು ಇರಾನ್ ಜೊತೆಗೆ ನಡೆದ ರಹಸ್ಯ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದರು.

ಜಾರ್ಜ್ ಡಬ್ಲು. ಬುಶ್ ಸಂತಾಪ:

ಒಮಾನ್ ದೊರೆ ಖಬೂಸ್ ನಿಧನಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲು. ಬುಶ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಮಧ್ಯ ಪ್ರಾಚ್ಯದಲ್ಲಿ ಸ್ಥಿರ ಶಕ್ತಿಯಾಗಿದ್ದರು ಎಂದು ಹೇಳಿಕೆಯೊಂದರಲ್ಲಿ ಅವರು ತಿಳಿಸಿದ್ದಾರೆ.

ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್, ಅಗಲಿದ ಒಮಾನ್ ದೊರೆಯನ್ನು ಗೌರವ, ವಾತ್ಸಲ್ಯ ಮತ್ತು ಜಾಣ್ಮೆಯ ಸುಲ್ತಾನ ಎಂಬುದಾಗಿ ಟ್ವಿಟರ್ ಸಂದೇಶವೊಂದರಲ್ಲಿ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News