ಪಾಕ್‌ನಲ್ಲಿ ಭಾವಿ ಪತ್ನಿಯಿಂದಲೇ ಸಿಖ್ ಯುವಕನ ಹತ್ಯೆ: ಯುವತಿಯ ಬಂಧನ

Update: 2020-01-11 15:14 GMT

ಪೇಶಾವರ (ಪಾಕಿಸ್ತಾನ), ಜ. 11: ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ 25 ವರ್ಷದ ಸಿಖ್ ವ್ಯಕ್ತಿಯೊಬ್ಬರ ಹತ್ಯೆಯು ‘ಸುಪಾರಿ ಹತ್ಯೆ’ಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ವ್ಯಕ್ತಿಯನ್ನು ಮದುವೆಯಾಗಲು ಇಷ್ಟವಿಲ್ಲದ ಅವರ ಭಾವಿ ಪತ್ನಿಯೇ ಅವರನ್ನು ಕೊಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಪರ್ವಿಂದರ್ ಸಿಂಗ್‌ರನ್ನು ಪಾಕಿಸ್ತಾನದ ಖೈಬರ್ ಪಖ್ತೂಂಖ್ವ ರಾಜ್ಯದಲ್ಲಿ ಕಳೆದ ಶನಿವಾರ ಅಜ್ಞಾತ ಬಂದೂಕುಧಾರಿಗಳು ಗುಂಡು ಹಾರಿಸಿ ಕೊಂದಿದ್ದರು. ಜನವರಿ 28ರಂದು ಅವರ ಮದುವೆ ನಡೆಯಲಿತ್ತು.

ಅವರ ಹತ್ಯೆಯನ್ನು ಬಲವಾಗಿ ಖಂಡಿಸಿರುವ ಭಾರತ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿತ್ತು.

ಪರ್ವಿಂದರ್ ಸಿಂಗ್ ಹತ್ಯಾ ಪ್ರಕರಣವನ್ನು ಬಿಡಿಸಲಾಗಿದೆ ಹಾಗೂ ಕೊಲೆ ಸಂಚಿನಲ್ಲಿ ಪಾಲ್ಗೊಂಡ ಆರೋಪದಲ್ಲಿ ಅವರ 18 ವರ್ಷದ ಭಾವೀ ಪತ್ನಿ ಪ್ರೇಮಾಕುಮಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯು ‘ಸುಪಾರಿ ಹತ್ಯೆ’ಯಾಗಿದ್ದು, ಬಲಿಪಶುವಿನ ಭಾವೀ ಪತ್ನಿಯು ಹಂತಕರಿಗೆ ಹಣ ನೀಡಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆಗೆ ಹೇಳಿದ್ದಾರೆ. ರಾಜ್ಯದ ದುರ್ಗಮ ಶಾಂಗ್ಲಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಪರ್ವಿಂದರ್ ಸಿಂಗ್‌ರನ್ನು ಮದುವೆಯಾಗಲು ಆಕೆ ಬಯಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

‘‘ಕೊಲೆಗಾಗಿ ಹಂತಕರಿಗೆ 7 ಲಕ್ಷ ರೂಪಾಯಿ ನೀಡುವ ಭರವಸೆಯನ್ನು ಆಕೆ ನೀಡಿದ್ದಳು’’ ಎಂದಿದ್ದಾರೆ.

ಮಲೇಶ್ಯದಲ್ಲಿ 6 ವರ್ಷ ಕೆಲಸ ಮಾಡಿದ ಬಳಿಕ ಸಿಂಗ್ ಪಾಕಿಸ್ತಾನಕ್ಕೆ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News