ರಾಜಕೀಯ ರ‍್ಯಾಲಿಯಲ್ಲಿ ಸರಕಾರಿ ನೌಕರರ ಉಪಸ್ಥಿತಿ ದಂಡನೀಯವಲ್ಲ: ತ್ರಿಪುರಾ ಹೈಕೋರ್ಟ್

Update: 2020-01-11 15:45 GMT

ಅಗರ್ತಲಾ,ಜ.12: ರಾಜಕೀಯ ರ‍್ಯಾಲಿಯಲ್ಲಿ ಉಪಸ್ಥಿತರಿದ್ದುದಕ್ಕಾಗಿ ಸರಕಾರಿ ನೌಕರರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಲಾಗದು ಎಂದು ತ್ರಿಪುರಾ ಹೈಕೋರ್ಟ್ ತೀರ್ಪು ನೀಡಿದೆ. ರಾಜಕೀಯ ಸಭೆಗಳಲ್ಲಿ ಸರಕಾರಿ ನೌಕರರ ಉಪಸ್ಥಿತಿಯು, ಸೇವಾ ನಡವಳಿಕೆಯ ನಿಯಮಗಳನ್ನು ಉಲ್ಲಂಘಿಸುವುದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

2017ರ ಡಿಸೆಂಬರ್ 31ರಂದು ಆಗಿನ ಆಡಳಿತಾರೂಢ ಎಡರಂಗವು ಆಯೋ ಜಿಸಿದ್ದ ರ್ಯಾಲಿಯಲ್ಲಿ ಉಪಸ್ಥಿತರಿದ್ದುದಕ್ಕಾಗಿ ಹಾಲಿ ಬಿಜೆಪಿ-ಐಪಿಎಫ್‌ಟಿ ಸರಕಾರವು ತ್ರಿಪುರಾ ರಾಜ್ಯ ಸರಕಾರದ ಉದ್ಯೋಗಿ ಲಿಪಿಕಾ ಪೌಲ್ ಅವರನ್ನು, ಆಕೆ ನಿವೃತ್ತಿ ಯಾಗುವ ನಾಲ್ಕು ದಿನಗಳ ಮೊದಲು ಅಮಾನತುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಲಿಪಿಕಾ ಹೈಕೋರ್ಟ್ ಮೆಟ್ಟಲೇರಿದ್ದರು.

 ‘‘ರ‍್ಯಾಲಿಯಲ್ಲಿ ಹಾಜರಾಗುವುದಕ್ಕೂ ಹಾಗೂ ರ್ಯಾಲಿಯಲ್ಲಿ ಪಾಲ್ಗೊಳ್ಳುವುದರ ನಡುವೆಯೂ ಭಾರೀ ವ್ಯತ್ಯಾಸವಿದೆ. ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಹಾಗೂ ಅವುಗಳ ನಾಯಕರು ರ‍್ಯಾಲಿಯಲ್ಲಿ ನಡೆಸುವುದು ಹಾಗೂ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡುವುದು ಸಾಮಾನ್ಯವಾಗಿದೆ. ಇಂತಹ ಸಭೆಗಳಲ್ಲಿ ಉಪಸ್ಥಿತರಿರುವವ ಸಭಿಕರನ್ನು, ರ್ಯಾಲಿಯಲ್ಲಿ ಭಾಗವಹಿಸಿದ್ದವರೆಂದು ಹೇಳಲು ಸಾಧ್ಯವಿಲ್ಲ’’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎ.ಖುರೇಷಿ ತಿಳಿಸಿದ್ದಾರೆ.

  ರ‍್ಯಾಲಿಯಲ್ಲಿ ವ್ಯಕ್ತಿಯೊಬ್ಬರ ಉಪಸ್ಥಿತಿಯು ಆತನ ಅಥವಾ ಆಕೆಯ ರಾಜಕೀಯ ನಿಷ್ಠೆಯನ್ನು ದೃಢಪಡಿಸುವುದಿಲ್ಲವೆಂದು ನ್ಯಾಯಾಧೀಶರು ಅಭಿಪ್ರಾಯಿಸಿದ್ದಾರೆ. ರಾಜ್ಯ ಸರಕಾರವು ಅರ್ಜಿದಾರೆಗೆ ಎಲ್ಲಾ ರೀತಿಯ ನಿವೃತ್ತಿ ಆನಂತರದ ಸವಲತ್ತುಗಳನ್ನು ಬಿಡುಗಡೆಗೊಳಿಸುವಂತೆಯೂ ಸೂಚಿಸಿದೆ. ಕಳೆದ ಎರಡು ತಿಂಗಳುಗಳಿಂದ ಲಿಪಿಕಾ ಪೌಲ್ ಅವರಿಗೆ ಪಿಂಚಣಿ ಆನಂತರದ ಯಾವುದೇ ಸವಲತ್ತುಗಳನ್ನು ಬಿಡುಗಡೆಗೊಳಿಸಿರಲಿಲ್ಲ.

 ಮೀನುಗಾರಿಕಾ ನಿರ್ದೇಶನಾಲಯದಲ್ಲಿ ಮೇಲ್ದರ್ಜೆ ಗುಮಾಸ್ತರಾಗಿದ್ದ ಲಿಪಿಕಾ ಪೌಲ್ ಅವರನ್ನು ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಆಕೆಯ ನಿವೃತ್ತಿಗೆ ನಾಲ್ಕು ದಿನಗಳ ಮೊದಲು ಅಮಾನತುಗೊಳಿಸಿತ್ತು ಹಾಗೂ ಆಕೆಯ ವಿರುದ್ಧ ಇಲಾಖಾಮಟ್ಟದ ತನಿಖೆಗಳನ್ನು ಕೈಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News