×
Ad

ಲ್ಯಾಪ್‌ಟಾಪ್ ನೀಡಲು ಒತ್ತಾಯ: ಉಪಮುಖ್ಯಮಂತ್ರಿ ಕಾರಜೋಳಗೆ ವಿದ್ಯಾರ್ಥಿಗಳಿಂದ ಮುತ್ತಿಗೆ

Update: 2020-01-12 18:52 IST

ಬಾಗಲಕೋಟೆ, ಜ. 12: ಪದವಿ ಅಭ್ಯಾಸ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಬೇಕೆಂದು ಆಗ್ರಹಿಸಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರಿಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ರವಿವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಪ್ತಾಹದಲ್ಲಿ ಡಿಸಿಎಂ ಕಾರಜೋಳಗೆ ಮುತ್ತಿಗೆ ಹಾಕಿದ ದಸಂಸ(ಅಂಬೇಡ್ಕರ್ ವಾದ) ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು, ರಾಜ್ಯ ಸರಕಾರ ಪ್ರಥಮ ವರ್ಷ ಪದವಿ ವಿದ್ಯಾರ್ಥಿಗಳಿಗಷ್ಟೇ ಲಾಪ್‌ಟಾಪ್ ವಿತರಣೆ ಯೋಜನೆ ಹಮ್ಮಿಕೊಂಡಿರುವುದು ಸಲ್ಲ ಎಂದು ಆಕ್ಷೇಪಿಸಿದರು.

ಸರಕಾರಿ ಕಾಲೇಜುಗಳಿಗೆ ಬರುವುದೇ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು. ಹೀಗಾಗಿ ಪದವಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಬೇಕು ಎಂದು ಆಗ್ರಹಿಸಿದರಲ್ಲದೆ, ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಿಡಿಮಿಡಿ: ವಿದ್ಯಾರ್ಥಿಗಳ ಏಕಾಏಕಿ ಮುತ್ತಿಗೆಯಿಂದ ವಿಚಲಿತರಾದ ಡಿಸಿಎಂ ಗೋವಿಂದ ಕಾರಜೋಳ, ‘ಏನ್ ನೀವಷ್ಟೇ ಬುದ್ಧಿವಂತರಲ್ಲ. ಮನವಿ ಕೊಡಲಿಕ್ಕೆ ಬಂದಿದ್ದೀರಿ, ಮನವಿ ಕೊಡಿ’ ಎಂದು ಸಿಡಿಮಿಡಿಗೊಂಡರು. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆ ಘೋಷಣೆ ಮಾಡಿದ್ದರು. ಆದರೆ, ನಮ್ಮ ವಿರುದ್ಧ ಈಗ ಪ್ರತಿಭಟನೆ ಮಾಡುವುದು ಸಲ್ಲ ಎಂದು ಗೋವಿಂದ ಕಾರಜೋಳ ವಿದ್ಯಾರ್ಥಿಗಳ ವಿರುದ್ಧ ಕಿಡಿಕಾರಿದರು.

‘ಸಿದ್ದರಾಮಯ್ಯ ಲ್ಯಾಪ್‌ಟಾಪ್ ಕೊಡಲಿಕ್ಕೆ ಆಗಲಿಲ್ಲ. ನೀವು ಅಧಿಕಾರದಲ್ಲಿದ್ದೀರಿ, ಕೊಡಿ. ಪ್ರಥಮ, ದ್ವೀತಿಯ ಸೇರಿ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಯೋಜನೆ ರೂಪಿಸಿದ್ದು, ಅದನ್ನು ಬಿಜೆಪಿ ಸರಕಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಿರುವುದು ಏಕೆ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು. ಇದರಿಂದ ಸಭಾಂಗಣದಲ್ಲಿ ಗೊಂದಲ ನಿರ್ಮಾಣವಾಯಿತು. ಮಧ್ಯಪ್ರವೇಶಿಸಿದ ಪೊಲೀಸರು ದಲಿತ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದರು.

ಸಮಾರಂಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ , ಎಸ್.ಪಿ.ಲೋಕೇಶ್, ಸಿಇಓ ಗಂಗೂಬಾಯಿ ಮಾನಕರ್ ಉಪಸ್ಥಿತರಿದ್ದರು.

‘ಸರಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಈ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ, ಅಧಿಕಾರಿಗಳು ಜನರ ತೆರಿಗೆ ಹಣದಲ್ಲಿ ತಮ್ಮ ಬಂಗಲೆಗಳನ್ನು ನವೀಕರಣ ಮಾಡಿಕೊಳ್ಳಬಹುದೇ?’ ಎಂದು ದಸಂಸ ಮುಖಂಡ ಯುವರಾಜ್, ಡಿಸಿಎಂ ಕಾರಜೋಳರನ್ನು ಪ್ರಶ್ನಿಸಿದರು.

‘ಸ್ವಮತ ದುರಾಭಿಮಾನ ಮತ್ತು ಅನ್ಯಮತದ್ವೇಷದಿಂದ ಹುಟ್ಟಿಕೊಂಡ ಧಾರ್ಮಿಕ ಸಂಘರ್ಷ ಈ ಸುಂದರ ಜಗತ್ತನ್ನು ಕುರೂಪಗೊಳಿಸಿದೆ. ಮನುಕುಲದ ಮುನ್ನಡೆಗೆ ಅಡ್ಡಿಯಾಗಿರುವ ಉಗ್ರ ಧರ್ಮಾಂಧತೆಯನ್ನು ತಿರಸ್ಕರಿಸೋಣ ಎಂಬ ವಿವೇಕಾನಂದರ ಚಿಂತನೆಯನ್ನು ಅವರ ಹುಟ್ಟುಹಬ್ಬದ ದಿನ ಮನನ ಮಾಡಿಕೊಳ್ಳೋಣ’

-ಸಿದ್ದರಾಮಯ್ಯ, ವಿಪಕ್ಷ ನಾಯಕ(ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News