ಮುಸ್ಲಿಮರನ್ನು ಓಡಿಸುವುದಿದ್ದರೆ 1947ರಲ್ಲಿಯೇ ಓಡಿಸುತ್ತಿದ್ದೆವು: ಸಂಸದ ಖೂಬಾ ವಿವಾದಾತ್ಮಕ ಹೇಳಿಕೆ
ಬಾಗಲಕೋಟೆ, ಜ.12: ಮುಸ್ಲಿಮರನ್ನು ಭಾರತದಿಂದ ಓಡಿಸುವುದಾಗಿದ್ದರೆ 1947 ರಲ್ಲಿಯೇ ಓಡಿಸುತ್ತಿದ್ದೆವು ಅಲ್ಲವೇ ಎಂದು ಸಂಸದ ಭಗವಂತ ಖೂಬಾ ಇಂದಿಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಲ್ಲಿನ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಪೌರತ್ವ(ತಿದ್ದುಪಡಿ) ಕಾಯ್ದೆ ಪರವಾಗಿ ಮಾತನಾಡಿದ ಅವರು, ಹಿಂದೂ ಸಮುದಾಯಕ್ಕೆ ಯಾರನ್ನೂ ಇಲ್ಲಿಂದ ಓಡಿಸಬೇಕು ಎಂಬ ಮನೋಭಾವವೇ ಇಲ್ಲ. ಕಾಂಗ್ರೆಸ್ ಮತ್ತು ಎಡಪಂಥೀಯರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಸಿಎಎ ವಿಚಾರ ಮುಂದಿಟ್ಟುಕೊಂಡು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ದೇಶ ವಿಭಜನೆ ಮಾಡಲು ಹೊರಟಿದೆ. ಪ್ರತಿಭಟನೆ ನೆಪದಲ್ಲಿ ದೇಶದಲ್ಲಿ ಆಗಿರುವ ದಂಗೆಗಳಿಗೆ ಹಾಗೂ ಸಾರ್ವಜನಿಕ ಆಸ್ತಿಗೆ ಆಗಿರುವ ಹಾನಿಗೆ ಕಾಂಗ್ರೆಸ್ ಪಕ್ಷವೇ ಹೊಣೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಿಸಿಡುವ ಸಂಗತಿ. ಪ್ರಧಾನಿ ಮೋದಿ ಇಂತಹ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ಗರೀಬಿ ಹಠಾವೋ ಘೋಷಣೆಯಿಂದ ಕಾಂಗ್ರೆಸ್ ನವರ ಬಡತನ ನಿವಾರಣೆ ಆಗಿದೆಯೇ ಹೊರತು ದೇಶದ ಜನರದ್ದಲ್ಲ. ಇದೀಗ ಜನರನ್ನು ಸಿಎಎ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುತ್ತಿದ್ದು, ಅಪಪ್ರಚಾರ ಮಾಡುತ್ತಿದೆ ಎಂದು ಸಚಿವೆ ಜೊಲ್ಲೆ ಟೀಕಿಸಿದರು.