ಸಿಎಎ-ಎನ್‌ಆರ್‌ಸಿ ಹಿಂಪಡೆಯದಿದ್ದರೆ ಮತ್ತೊಮ್ಮೆ 'ಭೀಮಾ ಕೋರೆಗಾಂವ್' ಯುದ್ಧ: ಜ್ಞಾನಪ್ರಕಾಶ್ ಸ್ವಾಮೀಜಿ ಎಚ್ಚರಿಕೆ

Update: 2020-01-12 17:22 GMT

ಮೈಸೂರು, ಜ.12: ದೇಶದಲ್ಲಿ ಮತ್ತೊಮ್ಮೆ ಭೀಮಾ ಕೋರೆಗಾಂವ್ ಮಾದರಿಯ ಯುದ್ಧ ನಡೆಯುವ ಮುಂಚೆ ಸಿಎಎ ಮತ್ತು ಎನ್‌ಆರ್‌ಸಿ ಯನ್ನು ಹಿಂಪಡೆದರೆ ಒಳ್ಳೆಯದು ಎಂದು ಕೇಂದ್ರ ಸರ್ಕಾರಕ್ಕೆ ಮೈಸೂರಿನ ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಎಚ್ಚರಿಕೆ ನೀಡಿದರು.

ನಂಜನಗೂಡಿನ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ರವಿವಾರ “ಭೀಮಾ ಕೋರೆಗಾಂವ್” ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಭೀಮಾ ನದಿ ತೀರದಲ್ಲಿ ಮಹಾರ್ ಸೈನಿಕರು ಪೇಶ್ವೆಗಳನ್ನು ಹೊಡೆದು ಓಡಿಸಿದ ಹಾಗೆ ದೇಶದಲ್ಲಿ ಮತ್ತೊಮ್ಮೆ ಕ್ರಾಂತಿಯಾಗುವ ಮುಂಚೆ ಸಿಎಎ, ಎನ್‌ಆರ್‌ಸಿ ಹಿಂಪಡೆಯಿರಿ. ದೇಶದ 97% ಮೂಲನಿವಾಸಿಗಳು ಶಾಂತಿಪ್ರಿಯರು. ಹಾಗಾಗಿ, ಶಾಂತ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಅವರನ್ನು ಪದೇ ಪದೇ ಕೆರಳಿಸುವ ಪ್ರಯತ್ನ ಮಾಡಿದರೆ ನಿಮ್ಮ ಕತೆ ಮುಗಿಯಿತು ಎಂದರ್ಥ ಎಂದು ಹೇಳಿದರು.

ಸಿಎಎ ಮತ್ತು ಎನ್‌ಆರ್‌ಸಿ ಜಾರಿ ಮಾಡುವ ಮೂಲಕ ಸಂವಿಧಾನದ ಬೇರುಗಳನ್ನು ಕಿತ್ತು ಹಾಕುವ ಕೆಲಸ ಮಾಡುತ್ತಿದ್ದೀರಿ. ದೇಶ ಕಟ್ಟಬೇಕೆ ಹೊರತು ದ್ವೇಷ ಕಟ್ಟಬಾರದು. ನಮ್ಮ ಆಯುಧಗಳು ಮಾತನಾಡುವ ಮುಂಚೆ ನಿಮ್ಮ ಕಾಯ್ದೆಯನ್ನು ವಾಪಸ್ ಪಡೆಯಿರಿ ಎಂದು  ಹೇಳಿದರು.

ಸಿಎಎ, ಎನ್‌ಆರ್‌ಸಿ ವಿರೋಧಿಸುವವರು ದೇಶದ್ರೋಹಿಗಳು ಎನ್ನುವುದಾದರೆ, ಸಂವಿಧಾನ ಬದಲಾಯಿಸುತ್ತೇವೆ ಎನ್ನುವವರು, ಮಹಿಳೆಯರ ಮೇಲೆ ಅತ್ಯಾಚಾರ ಮಾಡುವವರು, ದಲಿತ ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರ ಕಳುಹಿಸುವವರು, ಮೀಸೆ ಬಿಟ್ಟ ಎಂಬ ಒಂದೇ ಕಾರಣಕ್ಕೆ ದಲಿತ ಯುವಕನನ್ನು ಕೊಲೆ ಮಾಡುವವರು, ಮದುವೆ ಮನೆಗೆ ಕುದುರೆ ಏರಿ ಬಂದ ಎಂದು ದಲಿತ ಮಧುಮಗನನ್ನು ಕೊಚ್ಚಿ ಕೊಲೆ ಮಾಡುವವರು ದೇಶ ಪ್ರೇಮಿಗಳೇ ಎಂದು ಪ್ರಶ್ನಿಸಿದರು.

ಧರ್ಮದ ಹೆಸರಿನಲ್ಲಿ ಜಾತಿಯ ಹೆಸರಿನಲ್ಲಿ ಹೊಡೆದು ಆಳುವ ನೀತಿಯನ್ನು ಕಳೆದ 97 ವರ್ಷಗಳಿಂದ ಸಂಘಪರಿವಾರ ಮಾಡಿಕೊಂಡು ಬರುತ್ತಿದೆ. ಅದರ ಅಜೆಂಡಾ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು. ಅದಕ್ಕೆ ಇನ್ನೂ ಮೂರು ವರ್ಷಗಳ ಕಾಲಾವಕಾಶವಿದೆ. ಭಾರತ ಅಪಾಯದಲ್ಲಿದ್ದು ಭಾರತೀಯರಾದ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.

ಸಮಾಜದ ಅರಿವಿರದ ಮುಟ್ಟಾಳ ಸಂಸದ ಪಂಕ್ಚರ್ ಹಾಕುವವರು ಬೀದಿಯಲ್ಲಿ ಬಂದು ಹೋರಾಟ ಮಾಡುತ್ತಾರೆ ಎಂದು ಹೇಳುತ್ತಾನೆ. ಹಾಗಾದರೆ ಚಾಯ್ ಮಾರುವವರು ಪ್ರಧಾನಿಯಾಗಬಹುದೆ. ಎದೆಯಲ್ಲಿ ಎರಡಕ್ಷರ ಎನ್ನುವ ಮುಟ್ಟಾಳ ಸಂಸದನಿಗೆ ಲಕ್ಷಾಂತರ ಪಿಎಚ್‍ಡಿ ಮಾಡಿರುವವರು, ವಿಜ್ಞಾನಿಗಳು, ಸೇರಿದಂತೆ ಅನೇಕ ವಿದ್ಯಾರ್ಥಿಗಳು ಬೀದಿಗಳಿದು ಹೋರಾಟ ಮಾಡುತ್ತಿರುವುದು ಕಾಣುವುದಿಲ್ಲವೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News