ಯೇಸು ಪ್ರತಿಮೆ ವಿರುದ್ಧ ಸಂಘಪರಿವಾರದ 'ಕನಕಪುರ ಚಲೋ' ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ
ಬೆಂಗಳೂರು, ಜ. 13: ಬಿಜೆಪಿಯವರ ಬಳಿ ಅಧಿಕಾರ ಇದೆ. ಅವರು ಏನು ಬೇಕಾದರೂ ಮಾಡಲಿ. ಕ್ಷೇತ್ರದಲ್ಲಿ ಅಶಾಂತಿಯುಂಟು ಮಾಡಿದರೂ ನಾನೇನು ಮಾತನಾಡುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯೇಸು ಪ್ರತಿಮೆ ವಿರುದ್ಧ ಬಿಜೆಪಿ ಹಾಗೂ ಆರೆಸೆಸ್ಸ್‌ನಿಂದ ಕನಕಪುರ ಚಲೋ ಹಮ್ಮಿಕೊಂಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಯಾರು? ನನಗೆ ಅವರು ಯಾರು ಎಂದು ಗೊತ್ತಿಲ್ಲ. ಮಾನವ ಜೀವನಕ್ಕೆ ಜಯವಾಗುವ ಮಾನವ ಧರ್ಮದಲ್ಲಿ ನಾನು ನಂಬಿಕೆ ಇಟ್ಟವನು ಎಂದು ತಿಳಿಸಿದರು.
‘ನನ್ನ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ. ಯಾರು ಏನೇ ಮಾತಾಡಿದರೂ ಸುಮ್ಮನೆ ಇರಿ. ಎಷ್ಟೇ ಬೈದರು ಸುಮ್ಮನೆ ಇರಿ ಎಂದೂ ಹೇಳಿದ್ದೇನೆ. ಯಾರು ಗಲಾಟೆ ಮಾಡುವುದು ಬೇಡ. ಅವರು ಏನು ಬೇಕೋ ಅದನ್ನ ಮಾಡಿಕೊಂಡು ಹೋಗಲಿ’ ಎಂದು ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.
ಕನಕಪುರಕ್ಕೆ ಬೇರೆ ಬೇರೆ ಕಡೆಯಿಂದ ಎಷ್ಟು ಗಾಡಿಗಳು ಹೋಗಿವೆ ಎಂದು ಗೊತ್ತಿದೆ. ರಾಮನಗರದ ಮಾಜಿ ಮಂತ್ರಿ ನನಗೆ ಮಾಹಿತಿ ಕೊಟ್ಟರು. ತಪ್ಪು ತಿಳ್ಕೋಬೇಡಿ ಅಣ್ಣಾ.. ಏನೋ ಮಾಡ್ಕೊಂಡು ಹೋಗ್ತಾರೆ ಎಂದರು. ಪಾಪ ಅವರ ಹೆಸರನ್ನ ಬಹಿರಂಗಪಡಿಸಲ್ಲ. ಅವರಿನ್ನು ಸರಕಾರದಲ್ಲಿ ಮಂತ್ರಿ ಆಗಬೇಕಿದೆ. ರಾಜಕಾರಣ ನಿಂತ ನೀರಲ್ಲ. ಏನು ಬೇಕಾದರು ಆಗಬಹುದು. ರಾಜಕಾರಣದಲ್ಲಿ ನಮ್ಮ ನೆರಳನ್ನೇ ನಂಬಲಿಕ್ಕೆ ಆಗಲ್ಲ. ರಾತ್ರಿಯಾದರೆ ನಮ್ಮ ನೆರಳು ನಮ್ಮ ಜೊತೆನೇ ಇರಲ್ಲ ಎಂದು ಹೇಳಿದರು.
ಕನಕಪುರಕ್ಕೆ ಯಾರು ಬೇಕಾದರೂ ಬರಲಿ ನಾವು ಅವರನ್ನು ಸ್ವಾಗತಿಸುತ್ತೇವೆ. ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಿದ್ದಾರೆ, ಮಾಡಲಿ. ಅವರವರ ಖುಷಿಗೆ ಏನೇನ್ ಬೇಕು ಅದನ್ನ ಮಾಡ್ತಿದ್ದಾರೆ, ಮಾಡಲಿ. ಕನಕಪುರ ಕಸ ಗುಡಿಸುತ್ತೇವೆಂದರೂ, ಸ್ವಚ್ಛ ಮಾಡುತ್ತೇನೆ ಎನ್ನುತ್ತಿದ್ದಾರೆ, ಮಾಡಲಿ ಎಂದು ಹೇಳಿದರು.
ಸೋಲಾರ್ ಘಟಕ ಮಾಡಿದ್ದೇನೆ. ರೈತರಿಗೆ ಪಂಪ್‌ಸೆಟ್ ನೀಡಿದ್ದೇನೆ. ಪ್ರತಿ ಗ್ರಾಮಕ್ಕೆ ಕಾವೇರಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿನ ಕಟ್ಟಡಗಳನ್ನು ನೋಡಲಿ. ಇಡೀ ದೇಶದಲ್ಲೆ ನನ್ನ ಕ್ಷೇತ್ರ ನರೇಗಾ ಅತ್ಯುತ್ತಮವಾಗಿ ಜಾರಿಗೆ ತಂದಿದೆ ಅಂತ ಸರ್ಟಿಫಿಕೇಟ್ ನೀಡಿದೆ ಎಂದರು.
ನಮ್ಮ ಸರಕಾರದ ಅವಧಿಯಲ್ಲಿ ಮಾಗಡಿ ರಸ್ತೆಯಲ್ಲಿ ಕೆಂಪೇಗೌಡ ಪ್ರಾಧಿಕಾರಕ್ಕೆ ಕ್ರೈಸ್ತರು 5 ಎಕರೆ ಜಾಗ ಬಿಟ್ಟುಕೊಟ್ಟಿದ್ದಾರೆ. ನಾನು ಕೆ.ಜೆ.ಜಾರ್ಜ್ ಅವರೊಂದಿಗೆ ಮಾತನಾಡಿ, ಆರ್ಚ್ ಬಿಷಷ್ ಅವರಿಗೆ ಮನವಿ ಮಾಡಿಕೊಂಡಾಗ ಕೆಂಪೇಗೌಡ ಪ್ರಾಧಿಕಾರಕ್ಕೆ 5 ಎಕರೆ ಭೂಮಿ ಬಿಟ್ಟುಕೊಟ್ಟರು. ಬಿಜೆಪಿಯವರು ರಾಜಕಾರಣ ಮಾಡಬೇಕು ಎಂದು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಗಡ ಗಡ ನಡಗುತ್ತಿದ್ದೇನೆ: ಬಿಜೆಪಿಯನ್ನು ಕಂಡರೆ ನನಗೆ ಭಯ. ಹೀಗಾಗಿ ನಾನು ಗಡ ಗಡ ನಡುಗುತ್ತಿದ್ದೇನೆ. ಈಗಲೂ ನಡುಗುತ್ತಿದ್ದೇನೆ ನೋಡಿ ಎಂದು ಡಿ.ಕೆ. ಶಿವಕುಮಾರ್, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮರು ಪ್ರಶ್ನೆ ಹಾಕುವ ಮೂಲಕ ಬಿಜೆಪಿಯನ್ನು ಲೇವಡಿ ಮಾಡಿದರು.