ಮಂಗಳೂರು ಸೇರಿ ರಾಜ್ಯದ 5 ವಿಮಾನ ನಿಲ್ದಾಣಗಳ ಹೆಸರು ಮರು ನಾಮಕರಣಕ್ಕೆ ಚಿಂತನೆ

Update: 2020-01-13 13:05 GMT

ಬೆಂಗಳೂರು, ಜ. 13: ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಹೊರತುಪಡಿಸಿ ರಾಜ್ಯದ 5 ವಿಮಾನ ನಿಲ್ದಾಣಗಳ ಹೆಸರು ಮರು ನಾಮಕರಣ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

ಕಲಬುರಗಿ, ಬೆಳಗಾವಿ, ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಗೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಐತಿಹಾಸಿಕ ವ್ಯಕ್ತಿಗಳ ಹೆಸರು ನಾಮಕರಣ ಮಾಡಿ ಗೌರವ ಸಲ್ಲಿಸಲು ನಿರ್ಧರಿಸಿದೆ. ಅಲ್ಲದೆ, ಐತಿಹಾಸಿಕ ವ್ಯಕ್ತಿಗಳ ಹೆಸರು, ಸಾಧನೆ ಇನ್ನಿತರೆ ಸಮಗ್ರ ಮಾಹಿತಿ ಸಲ್ಲಿಸುವಂತೆ ಜಿಲ್ಲಾಡಳಿತಗಳಿಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೇಳಿದೆ.

ಮೈಸೂರು ಜಿಲ್ಲೆಯ ಮಂಡಕಳ್ಳಿ, ಮಂಗಳೂರಿನ ಬಜ್ಪೆ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಬೆಳಗಾವಿಯ ಸಾಂಬ್ರಾ, ಕಲಬುರಗಿಯ ಸರಡಗಿ, ಬಳ್ಳಾರಿ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳ ವಿಮಾನ ನಿಲ್ದಾಣಗಳನ್ನು ಆಯಾ ಊರುಗಳ ಹೆಸರಿನಿಂದಲೇ ಗುರುತಿಸಲಾಗಿದೆ.

2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ, ಹುಬ್ಬಳ್ಳಿ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಎಂದು ನಾಮಕರಣ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ, ರಾಜಕೀಯ ಕಾರಣಗಳಿಂದ ಇದು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೊಂದು ಬಾರಿ ಹೆಸರು ಮರು ನಾಮಕರಣದ ಪ್ರಸ್ತಾಪ ಬಂದಿದೆ.

ಅಂತರ್‌ರಾಷ್ಟ್ರೀಯ, ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿಮಾನ ನಿಲ್ದಾಣ ಪಟ್ಟಿಯಲ್ಲಿರುವ ವಿಮಾನ ನಿಲ್ದಾಣಗಳನ್ನು ಆಯಾ ಊರುಗಳ ಹೆಸರಿನಿಂದ ಕರೆಯುವ ಬದಲಿಗೆ, ಆ ಭಾಗದ ಸ್ವಾತಂತ್ರ ಹೋರಾಟಗಾರರು, ಐತಿಹಾಸಿಕ ವ್ಯಕ್ತಿಗಳ ಹೆಸರು ಇಡುವುದು ಸೂಕ್ತ. ಆ ಮೂಲಕ ಆ ಭಾಗದ ಐತಿಕಾಸಿಕ ಹಿನ್ನೆಲೆ ಇಡೀ ಜಗತ್ತಿಗೆ ತಿಳಿಯಲು ಸಾಧ್ಯವಾಗುತ್ತದೆ ಎಂಬ ಉದ್ದೇಶ ಹೊಂದಲಾಗಿದೆ.

ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಿಗೆ ಸರಕಾರ ಮರು ನಾಮಕರಣ ಮಾಡಲು ಮುಂದಾಗಿರುವ ಕ್ರಮ ಸ್ವಾಗತಾರ್ಹ. ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಹೆಸರಿಡುವುದು ಸೂಕ್ತ.

-ಸುರೇಶ್ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News