ತೆಲಂಗಾಣದ ಭೈನ್ಸಾದಲ್ಲಿ ಹಿಂಸಾಚಾರ: ಇಂಟರ್‌ನೆಟ್ ಸ್ಥಗಿತ

Update: 2020-01-14 14:46 GMT

ಹೈದರಾಬಾದ್, ಜ. 13: ಎರಡು ಸಮುದಾಯಗಳ ನಡುವೆ ರವಿವಾರ ಘರ್ಷಣೆ ಸಂಭವಿಸಿ 8 ಮಂದಿ ಪೊಲೀಸ್ ಸಿಬ್ಬಂದಿ ಸಹಿತ ಕನಿಷ್ಠ 19 ಮಂದಿ ಗಾಯಗೊಂಡಿರುವುದರಿಂದ ತೆಲಂಗಾಣದ ಆದಿಲ್‌ಬಾದ್ ಜಿಲ್ಲೆಯ ಭೈನ್ಸಾ ಪಟ್ಟಣ ಉದ್ವಿಗ್ನಗೊಂಡಿದೆ. ಹಿಂಸಾಚಾರ ಸೋಮವಾರ ಕೂಡ ಮುಂದುವರಿದಿದ್ದು, 13 ಮನೆಗಳಿಗೆ ಹಾಗೂ 26 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 4 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ. ಕೆಲವು ಯುವಕರು ಸೈಲೆನ್ಸರ್ ಇಲ್ಲದ ಬೈಕ್ ಚಲಾಯಿಸುತ್ತಿರುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಭೈನ್ಸಾದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ರವಿವಾರ ರಾತ್ರಿ ಹಿಂಸಾಚಾರ ಪ್ರಾರಂಭವಾಯಿತು. ಅನಂತರ ಎಲ್ಲರನ್ನೂ ಕರೆದು ರಾಜಿ ಮಾಡಿದರೂ ಕೆಲವು ಅಪರಿಚಿತ ದುಷ್ಕರ್ಮಿಗಳು ಕಲ್ಲೆಸೆದುದರಿಂದ ಪರಿಸ್ಥಿತಿ ಕೈಮೀರಿ ಹೋಯಿತು. ಇದರಿಂದ ಎರಡೂ ಗುಂಪು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿತು. ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಆದರೆ, ಸೋಮವಾರ ಕೂಡ ಕೆಲವು ಹಿಂಸಾಚಾರದ ಘಟನೆಗಳು ನಡೆದವು. ಘರ್ಷಣೆ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಕನಿಷ್ಠ 60 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 9 ಎಫ್‌ಐಆರ್ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವದಂತಿ ಹರಡುವುದನ್ನು ತಡೆಯಲು ನಿರ್ಮಲಾ, ಆದಿಲ್‌ಬಾದ್, ಮಂಚೇರಿಯಾಲ್ ಹಾಗೂ ಆಸೀಫಾಬಾದ್‌ನಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News