ಕೆ.ಆರ್.ಆಸ್ಪತ್ರೆ ಪ್ರಾಧ್ಯಾಪಕ ಹುದ್ದೆ ಪದೋನ್ನತಿಗೆ ಕೋಟಿಗಟ್ಟಲೆ ಅವ್ಯವಹಾರ: ಪ್ರೊ.ಮಹೇಶ್ ಚಂದ್ರಗುರು

Update: 2020-01-14 17:32 GMT

ಮೈಸೂರು,ಜ.14: ಮೈಸೂರಿನ ದೊಡ್ಡಾಸ್ಪತ್ರೆ ಎಂದೆ ಹೆಸರುವಾಸಿಯಾಗಿರುವ ಕೆ.ಆರ್.ಆಸ್ಪತ್ರೆಯಲ್ಲಿ ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ಪಡೆಯಲು ಕೋಟಿಗಟ್ಟಲೆ ಅವ್ಯವಾಹರ ನಡೆದಿದೆ ಎಂಬ ಅಂಶ ತಿಳಿದುಬಂದಿದ್ದು. ಒಂದು ವೇಳೆ ಅಂತಹ ಅಕ್ರಮ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾದರೆ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಎಚ್ಚರಿಸಿದ್ದಾರೆ.

ಕೆ.ಆರ್.ಆಸ್ಪತ್ರೆಯ ಅಧೀಕ್ಷಕ ಹುದ್ದೆಗೇರಲು ಅಲ್ಲಿನ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಶೇಖರ್ ಹಣ ಬಲ, ಜಾತಿ ಬಲ ಬಳಸುತಿದ್ದು, ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆ ಇಲ್ಲದಿದ್ದರೂ ಅಕ್ರಮವಾಗಿ ಪ್ರಾಧ್ಯಾಪಕ ಹುದ್ದೆ ಪಡೆದು ಅಧೀಕ್ಷಕ ಸ್ಥಾನ ಪಡೆಯಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಭಾರತೀಯ ವೈದ್ಯಕೀಯ ಮಂಡಳಿ ನಿಯಮವನ್ನು ಗಾಳಿಗೆ ತೂರಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ನಿಯಮ ಮೀರಿ ಡಾ.ಚಂದ್ರಶೇಖರ್ ಅವರನ್ನು ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ನೀಡಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ಹೈಕೋರ್ಟ್‍ನಲ್ಲಿ ಸಲ್ಲಿಸಿ ಕಾನೂನು ಹೋರಾಟ ಮಾಡಲಾಗುವುದು. ಜೊತೆಗೆ ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳೊಡಗೂಡಿ ಬೆಂಗಳೂರಿನಲ್ಲಿಯೇ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News