ಕಲಬುರಗಿಯಲ್ಲಿ ಪರ್ಯಾಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಿಂತನೆ ?

Update: 2020-01-14 18:07 GMT

ಕಲಬುರಗಿ: ಮುಂದಿನ ತಿಂಗಳು ಫೆ. 5,6 ಹಾಗೂ 7ರಂದು ನೃಪತುಂಗನ ನೆಲ ಕಲಬುರಗಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಮತ್ತೊಂದು ಸಮ್ಮೇಳನ ನಡೆಸಲಾಗುವುದು ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ.

ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾಡಳಿತದ ಮೇಲೆ ಮುನಿಸಿಕೊಂಡ ಇಲ್ಲಿನ ಕೆಲ ಸಾಹಿತಿಗಳು, ಕವಿ-ಕಲಾವಿದರು ಈ ದಿಸೆಯಲ್ಲಿ ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ ಎನ್ನಲಾಗಿದೆ. ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದಾಗ ಖುಷಿ ಪಟ್ಟಿದ್ದ ಇಲ್ಲಿನ ಜನತೆ ಸಮ್ಮೇಳನಾಧ್ಯಕ್ಷರ ಆಯ್ಕೆಯ ನಂತರ ನಿರಾಶರಾಗಿದ್ದಾರೆ ಎನ್ನಲಾಗಿದೆ.

ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವರ ಎದುರುಗಡೆ ಸಮ್ಮೇಳನ ನಡೆಸುವುದಕ್ಕೆ ತಮ್ಮ ಸಹಮತವಿಲ್ಲ ಎಂದು ಪ್ರತಿರೋಧ ವ್ಯಕ್ತಪಡಿಸಿದ್ದರು. ಪ್ರಕೃತಿ ವಿಕೋಪದಿಂದ ಈ ಭಾಗದದಲ್ಲಿ ತೀವ್ರ ಬರಗಾಲ ತಲೆದೋರಿದ್ದು, ಈ ಬಾರಿ ಸಮ್ಮೇಳನ ನಡೆಸುವುದು ಬೇಡ. ಅದೇ ಹಣವನ್ನು ಬರ ಪರಿಹಾರ ನಿಧಿಗೆ ಕೊಟ್ಟು ರೈತರಿಗೆ ನೆರವಾಗಿರಿ ಎಂಬ ವಾದ ಕೂಡ ಮಾಡಿದ್ದರು. ಇದೇ ವೇಳೆಯಲ್ಲಿ ಕಲಬುರಗಿಯಲ್ಲಿ ಸಮ್ಮೇಳನ ನಡೆಸುತ್ತಿರುವುದು ಸಂತೋಷದ ಸಂಗತಿ. ಆದರೆ ಈ ಬಾರಿಯ ಸಮ್ಮೇಳನ ಮುಂದೂಡಿ ಎಂಬ ಸಲಹೆ ಕೂಡ ಮುಂದಿಟ್ಟಿದ್ದರು.

ಇದೆಲ್ಲದಕ್ಕೂ ಮಿಗಿಲಾಗಿ ತಮಗೆ ಈ ಸಮ್ಮೇಳನದಲ್ಲಿ ತಮ್ಮ ಹೆಸರು ಹಾಕಿಲ್ಲ. ತಮ್ಮನ್ನು ಸಂಪರ್ಕಿಸಿಲ್ಲ. ತಮಗೆ ಬೇಕಾದವರಿಗೆ ಮಾತ್ರ ಮಣೆ ಹಾಕಿದ್ದಾರೆ. ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿವೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಒಳಗೊಳಗೆ ಅಸಮಾಧನಗೊಂಡಿದ್ದ ಕೆಲ ಕನ್ನಡಪರ ಸಂಘಟನೆಗಳ ಮುಖಂಡರು, ಸಾಹಿತಿಗಳು, ಲೇಖಕರು ಸೇರಿಕೊಂಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಸಮ್ಮೇಳನ ನಡೆಸುವ ತಯಾರಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News