ಸರಕಾರಿ ಶಾಲೆಯಲ್ಲಿ ಸಿನೆಮಾ ಹಾಡಿಗೆ ಶಿಕ್ಷಕರ ಅಸಭ್ಯ ನೃತ್ಯ ಆರೋಪ: ಶಾಲೆಗೆ ನೋಟಿಸ್

Update: 2020-01-15 14:25 GMT

ಬೆಂಗಳೂರು, ಜ.15: ಸರಕಾರಿ ಶಾಲೆಯ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಸಿನೆಮಾದ ಹಾಡೊಂದಕ್ಕೆ ಶಿಕ್ಷಕರು ನೃತ್ಯ ಮಾಡಿರುವ ಸಂಬಂಧ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಸೂಚನೆಯಂತೆ ಶಾಲೆಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಹನುಮಂತನಗರದ ರಾಮಾಂಜನೇಯ ರಸ್ತೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈ ಪ್ರಕರಣ ನಡೆದಿದೆ. ಈ ನೃತ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಿಕ್ಷಕರಿಗೆ ನೋಟಿಸ್ ನೀಡಿರುವುದರ ಕುರಿತು ಸಾಕಷ್ಟು ಆಕ್ಷೇಪಣೆಗಳು ವ್ಯಕ್ತವಾಗಿವೆ.

ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ, ಸರಕಾರಿ ಶಾಲೆಯ ಕಾರ್ಯಕ್ರಮದಲ್ಲಿ ಶಿಕ್ಷಕರು ಸಿನೆಮಾ ಹಾಡಿಗೆ ಅಸಭ್ಯ ರೀತಿಯಲ್ಲಿ ನೃತ್ಯ ಮಾಡಿರುವುದು ಒಳ್ಳೆಯ ಸಂದೇಶದಿಂದ ಕೂಡಿಲ್ಲ. ಇದು ಮಕ್ಕಳಿಗೆ ಶೈಕ್ಷಣಿಕ, ಮಾನಸಿಕ ಮತ್ತು ಬೌದ್ಧಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಈಗಾಗಲೇ ಈ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸರಕಾರಿ ಶಾಲೆಯ ಕುರಿತು ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾಡಿನ ಶಿಕ್ಷಕರ ನಡೆ ನುಡಿಗಳು ಶಾಲೆ ಹಾಗೂ ಅವರ ವೃತ್ತಿಗೆ ಗೌರವ ಹೆಚ್ಚಿಸುವಂತೆ ಇರಬೇಕು. ಅಸಭ್ಯ ನೃತ್ಯ ಪ್ರದರ್ಶನ ಶಾಲೆಯ ಮಕ್ಕಳು ಶಿಕ್ಷಕರ ಬಗ್ಗೆ ಯಾವ ರೀತಿಯಲ್ಲಿ ಮಾತನಾಡಬಹುದು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಅವರು ಸೂಚಿಸಿದ್ದಾರೆ. ಬಾಕ್ಸ್

ಜ.16ರಂದು ಸೂಕ್ತ ಕ್ರಮ

ಸರಕಾರಿ ಶಾಲೆಯಲ್ಲಿ ಶಿಕ್ಷಕರು ಹಾಡೊಂದಕ್ಕೆ ನೃತ್ಯ ಮಾಡಿರುವ ಸಂಬಂಧ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ನೃತ್ಯದಲ್ಲಿ ಭಾಗವಹಿಸಿದ ಶಿಕ್ಷಕರ ವಿರುದ್ಧ ಇಂದು, ಜ.16ರಂದು ಕ್ರಮ ಕೈಗೊಳ್ಳಲಾಗುವುದು. 

ನೃತ್ಯ ಮಾಡೋದರಲ್ಲಿ ತಪ್ಪೇನಿದೆ?

ಶಾಲಾ ಶಿಕ್ಷಕರ ಗುಂಪು ಸಿನಿಮಾ ಹಾಡೊಂದಕ್ಕೆ ವೇದಿಕೆಯಲ್ಲಿ ನೃತ್ಯ ಮಾಡಿರುವುದಕ್ಕೆ ನೋಟಿಸ್ ಜಾರಿಗೊಳಿಸಿರುವ ಸಚಿವ ಸುರೇಶ್ ಕುಮಾರ್ ಕ್ರಮವು ಚರ್ಚೆಗೆ ಗ್ರಾಸವಾಗಿದೆ. ಶಿಕ್ಷಕರ ನೃತ್ಯ ಪ್ರದರ್ಶಿಸುವುದರಲ್ಲಿ ತಪ್ಪೇನಿದೆ. ನೃತ್ಯ ಮಾಡುವುದು ಅಶ್ಲೀಲ ಅಸಭ್ಯ ಪ್ರದರ್ಶನವಲ್ಲವೆಂದು ಸಾಮಾಜಿಕ ಜಾಲತಾಣದಲ್ಲಿ ಲವು ಮಂದಿ ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News