ಪ್ರವಾಹ ಬಂದಾಗ ವಚನಾನಂದ ಸ್ವಾಮಿ ಎಲ್ಲಿಗೆ ಹೋಗಿದ್ದರು?: ಶಾಸಕ ಯತ್ನಾಳ್ ವಾಗ್ದಾಳಿ

Update: 2020-01-15 14:48 GMT

ವಿಜಯಪುರ, ಜ. 15: ‘ಮುರುಗೇಶ್ ನಿರಾಣಿ ಸಚಿವ ಸ್ಥಾನ ಕೇಳಿದರೆ ಉಳಿದ ಪಂಚಮಸಾಲಿ ಮುಖಂಡರೇನು ಕತ್ತೆ ಕಾಯಲು ಹೋಗಬೇಕೇ?’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುರುಗೇಶ್ ನಿರಾಣಿ ತನ್ನ ಮನೆಯ ನಾಯಿ ಮತ್ತು ಬೆಕ್ಕಿಗೂ ಸ್ಥಾನಮಾನ ಕೇಳುತ್ತಾರೆ. ಅವರಿಂದ ಪಕ್ಷಕ್ಕೇನು ಲಾಭ ಆಗಲಿಲ್ಲ. ಆದರೆ, ಅವರ ಹೆಸರಿನಲ್ಲಿ ನಾಲ್ಕೈದು ಸಕ್ಕರೆ ಕಾರ್ಖಾನೆಗಳನ್ನು ಮಾಡಿಕೊಂಡಿದ್ದಾರೆಂದು ವಾಗ್ದಾಳಿ ನಡೆಸಿದರು.

ಬೆದರಿಕೆ ಸಲ್ಲ: ಸಿಎಂ ಯಡಿಯೂರಪ್ಪನವರಿಗೆ ಬೆದರಿಕೆ ಹಾಕುವುದು ಸಲ್ಲ. ಶ್ವಾಸಗುರು ವಚನಾನಂದ ಸ್ವಾಮಿ ಗೌರವಯುತವಾಗಿ ನಡೆದುಕೊಳ್ಳಬೇಕು. ಎಲ್ಲ ಜಾತಿ, ಧರ್ಮವನ್ನು ಸಮಾನವಾಗಿ ನೋಡಬೇಕು ಎಂದು ಗರಂ ಆದ ಯತ್ನಾಳ್, ನನಗೂ ಸಚಿವನಾಗಲು ಅರ್ಹತೆ ಇದೆ. ಆದರೆ, ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮುದಾಯದ ಕಾರ್ಯಕ್ರಮಕ್ಕೆ ಸಿಎಂರನ್ನು ಆಹ್ವಾನಿಸಿ ಅಪಮಾನ ಮಾಡುವುದು ಸರಿಯಲ್ಲ. ಸ್ವಾಮೀಜಿ ತಮ್ಮ ವರ್ತನೆ ಬದಲಿಸಿಕೊಳ್ಳಬೇಕಿದೆ. ನಮ್ಮ ನಾಯಕರಿಗೆ ನಮ್ಮವರೆ ಮುಳುವಾಗಬಾರದು ಎಂದು ಕೋರಿದ ಅವರು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದ ವೇಳೆ ಈ ಸ್ವಾಮಿ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.

ನಿರಾಣಿ, ಬಿಎಸ್‌ವೈ ನನ್ನ ತಂದೆ ಸಮಾನ ಎನ್ನುತ್ತಾರೆ. ಆದರೆ, ಕಾರ್ಯಕ್ರಮಕ್ಕೆ ಆಹ್ವಾನಿಸಿ ಹೀಗೆ ಮಾಡಿದ್ದು ಸರಿಯಲ್ಲ. ಕೂಡಲ ಸಂಗಮ ಮತ್ತು ಹರಿಹರ ಎರಡೂ ಮಠಗಳನ್ನು ನಿಭಾಯಿಸಲು ನಿರಾಣಿ ಹೊರಟಿದ್ದಾರೆ. ಇದನ್ನು ಸಮುದಾಯ ಎಂದೂ ಒಪ್ಪಲು ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News