ಹುಬ್ಬಳ್ಳಿಯ ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಅಶೋಕ ಮರಗಳಿಗೆ ಕೊಡಲಿ: ಆರೋಪ

Update: 2020-01-15 15:06 GMT

ಹುಬ್ಬಳ್ಳಿ, ಜ. 15: ಪೌರತ್ವ ತಿದ್ದುಪಡಿ ಕಾಯ್ದೆ ಪರ ಅಭಿಯಾನಕ್ಕೆ ಜ.18ರಂದು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆ ನಗರದ ನೆಹರೂ ಮೈದಾನದಲ್ಲಿದ್ದ ಆರು ಅಶೋಕ ಮರಗಳನ್ನು ಕಡಿದಿರುವ ಆರೋಪ ಕೇಳಿಬಂದಿದೆ.

ಬುಧವಾರ ಕಾರ್ಯಕ್ರಮದ ಸಿದ್ದತೆ ಪರಿಶೀಲನೆಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್‌ಗೆ ಮರ ಕಡಿದಿರುವ ವಿಚಾರವನ್ನು ಮಾಧ್ಯಮ ಪ್ರತಿನಿಧಿಗಳು ಜೋಶಿ ಗಮನಕ್ಕೆ ತಂದರು. ಕೂಡಲೇ ಈ ಬಗ್ಗೆ ಪ್ರಶ್ನಿಸಿದ ಜೋಶಿ, ಯಾವುದೇ ಪಕ್ಷದ ಕಾರ್ಯಕ್ರಮವಿದ್ದರೂ ಮರಗಳನ್ನು ಕಡಿಯಬಾರದು. ಇವುಗಳನ್ನು ಕಡಿಯಲು ನಿಮಗೆ ಅನುಮತಿ ಕೊಟ್ಟವರು ಯಾರು ಎಂದು ಮರ ಕಡಿಯತ್ತಿದ್ದವರನ್ನು ಕೇಳಿದರು.

ತಕ್ಷಣವೇ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಹಿಟ್ನಾಳ್ ಅವರಿಗೆ ದೂರವಾಣಿ ಕರೆ ಮಾಡಿ ಮರಗಳನ್ನು ಕಡಿದವರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಈ ವೇಳೆ ಸ್ಥಳದಲ್ಲಿಯೇ ಇದ್ದ ಪೊಲೀಸರನ್ನೂ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಭದ್ರತೆಯ ಕಾರಣಕ್ಕಾಗಿ ಮರದ ಕೊಂಬೆಗಳನ್ನು ಮಾತ್ರ ಕತ್ತರಿಸುವಂತೆ ಹೇಳಿದ್ದೆವು. ಆದರೆ, ಪೂರ್ತಿಯಾಗಿ ಮರಗಳನ್ನು ಕಡಿದಿದ್ದಾರೆ ಎಂದು ಸಮಜಾಯಿಷಿ ನೀಡಿದರು. ವಲಯ ಸಹಾಯಕ ಆಯುಕ್ತರಿಗೆ ಈ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News