ತನ್ನ ವಿರುದ್ಧದ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಉಚ್ಚಾಟಿತ ಬಿಜೆಪಿ ಶಾಸಕ ಸೆಂಗಾರ್

Update: 2020-01-15 16:20 GMT

ಹೊಸದಿಲ್ಲಿ,ಜ.15: ಉನ್ನಾವೊದಲ್ಲಿ 2017ರಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅಪಹರಿಸಿದ್ದ ಮತ್ತು ಅತ್ಯಾಚಾರವೆಸಗಿದ್ದ ಆರೋಪದಲ್ಲಿ ತನ್ನ ದೋಷನಿರ್ಣಯ ಮತ್ತು ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ ಸೆಂಗಾರ್ ಬುಧವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದಾನೆ.

ಕಳೆದ ವರ್ಷದ ಡಿ.20ರಂದು ವಿಚಾರಣಾ ನ್ಯಾಯಾಲಯವು ಸೆಂಗಾರ್‌ಗೆ ಜೀವಾವಧಿ ಶಿಕ್ಷೆಯ ಜೊತೆಗೆ 25 ಲ.ರೂ.ಗಳ ಭಾರೀ ದಂಡವನ್ನೂ ವಿಧಿಸಿತ್ತು.

ಅತ್ಯಾಚಾರ ಸಂತ್ರಸ್ತೆಯು ಆಗಿನ ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರಿಗೆ ಬರೆದಿದ್ದ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಆ.1ರಂದು ಉನ್ನಾವೊ ಅತ್ಯಾಚಾರ ಘಟನೆಗೆ ಸಂಬಂಧಿಸಿದ ಎಲ್ಲ ಐದೂ ಪ್ರಕರಣಗಳನ್ನು ಉತ್ತರ ಪ್ರದೇಶದ ಲಕ್ನೋ ನ್ಯಾಯಾಲಯದಿಂದ ದಿಲ್ಲಿಯ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸಿತ್ತು ಮತ್ತು ದೈನಂದಿನ ವಿಚಾರಣೆ ನಡೆಸುವಂತೆ ಹಾಗೂ 45 ದಿನಗಳಲ್ಲಿ ಅದನ್ನು ಪೂರ್ಣಗೊಳಿಸುವಂತೆ ನಿರ್ದೇಶ ನೀಡಿತ್ತು. ದಿಲ್ಲಿ ನ್ಯಾಯಾಲಯವು ಆ.15ರಿಂದ ವಿಚಾರಣೆಯನ್ನು ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News