×
Ad

‘ಸಾಗರಮಾಲಾ’ ಯೋಜನೆಯಿಂದ ಮೀನುಗಾರರಿಗೆ ತೊಂದರೆ ಇಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2020-01-16 17:39 IST

ಬೆಂಗಳೂರು, ಜ. 16: ಕೇಂದ್ರ ಸರಕಾರದ ‘ಸಾಗರಮಾಲಾ’ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆ ಕಾರವಾರ ಬಂದರು ಅಭಿವೃದ್ಧಿಯಿಂದ ಸ್ಥಳೀಯ ಮೀನುಗಾರರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರಮಾಲಾ ಯೋಜನೆಯಡಿ ಬಂದರು ಅಭಿವೃದ್ಧಿಯಿಂದ ಸ್ಥಳೀಯ ಮೀನುಗಾರರ ಸಾಂಪ್ರದಾಯಿಕ ಮತ್ತು ಯಾಂತ್ರೀಕೃತ ಮೀನುಗಾರಿಕೆಗೆ ತೊಂದರೆಯಾಗುತ್ತದೆಂದು ಮೀನುಗಾರರನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಸಾಗರಮಾಲಾ ಯೋಜನೆ ಬಿಜೆಪಿ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದಲ್ಲ. ಈ ಹಿಂದೆ 2017ರ ಡಿಸೆಂಬರ್‌ನಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ವೇಳೆ ಇದ್ದ ಶಾಸಕರು ಇದೀಗ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಈ ಯೋಜನೆಯಿಂದ ಮೀನುಗಾರರಿಗೆ ತೊಂದರೆಯಿಲ್ಲ. ಅಲ್ಲದೆ, ಕಾರವಾರ ರವೀಂದ್ರನಾಥ ಠ್ಯಾಗೂರ್ ಕರಾವಳಿ ತೀರಕ್ಕೂ ಯಾವುದೇ ತೊಂದರೆಯಾಗುವುದಿಲ್ಲ. ಹೀಗಿದ್ದರೂ ಸ್ಥಳೀಯ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕೋಟ ಶ್ರೀನಿವಾಸಪೂಜಾರಿ ದೂರಿದರು.

125 ಕೋಟಿ ರೂ.ವೆಚ್ಚದಲ್ಲಿ ಬಂದರು ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಕಾರವಾರ ಬಂದರಿನ 880 ಮೀಟರ್ ಅಲೆ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ. ಈ ಬಂದರು ಸರ್ವಋತು ಬಂದರು ಆಗಿ ರೂಪುಗೊಂಡು ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.

ಈ ಬಂದರು ಅಭಿವೃದ್ಧಿಯಿಂದ ವಾಣಿಜ್ಯ ಚಟುವಟಿಕೆ ಹೆಚ್ಚುವುದಲ್ಲದೆ, ಉದ್ಯೋಗಾವಕಾಶಗಳು ದೊರೆಯಲಿವೆ ಎಂದ ಅವರು, ಈ ಯೋಜನೆಯಿಂದ ಯಾವುದೇ ತೊಂದರೆ ಇಲ್ಲದಿದ್ದರೂ ಕಾಂಗ್ರೆಸ್ ನಾಯಕರುಗಳು ಮೀನುಗಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.

ಶಾಸಕಿ ಕಣ್ಣೀರು: ಸಾಗರಮಾಲಾ ಯೋಜನೆ ವಿರೋಧಿ ಪ್ರತಿಭಟನೆ ನೆಪದಲ್ಲಿ ನನ್ನ ಫೋಟೋ ವಿರೂಪಗೊಳಿಸಿದಲ್ಲದೆ, ಚಪ್ಪಲಿ ಹಾರ ಹಾಕಿದ್ದು ನನಗೆ ಅತೀವ ನೋವು ತಂದಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಶಾಸಕಿ ರೂಪಾಲಿ ನಾಯ್ಕ ಕಣ್ಣೀರಿಟ್ಟರು.
ಸಾಗರಮಾಲಾ ಯೋಜನೆ ಸ್ಥಳೀಯ ಮೀನುಗಾರರಿಗೆ ಬೇಡ ಎಂದರೆ ನನಗೂ ಬೇಡ. ಯೋಜನೆಯಿಂದ ಯಾವುದೇ ತೊಂದರೆ ಇಲ್ಲ ಎಂದು ಗೊತ್ತಿದ್ದರೂ, ನನ್ನ ವಿರುದ್ಧ ಮಾಜಿ ಶಾಸಕರಾದ ಸತೀಶ್ ಸೈಲ್, ಆನಂದ್ ಅಸ್ನೋಟಿಕರ್ ತನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆಂದು ದೂರಿದರು. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹಾಜರಿದ್ದರು.

‘ಸಾಗರಮಾಲಾ ಯೋಜನೆ ವಿರೋಧಿಸುವ ನೆಪದಲ್ಲಿ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತಿದೆ. ರಾಜಕೀಯ ಉದ್ದೇಶಕ್ಕಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಮಾಜಿ ಶಾಸಕ ಸತೀಶ್ ಸೈಲ್ ಷಡ್ಯಂತ್ರ ರೂಪಿಸುತ್ತಿದ್ದಾರೆ. ಯೋಜನೆಯಿಂದ ಮೀನುಗಾರರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ’
-ರೂಪಾಲಿ ನಾಯ್ಕ, ಶಾಸಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News