ಭಾರತವನ್ನು ಹಿಂದೂರಾಷ್ಟ್ರವಾಗಲು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಡುವುದಿಲ್ಲ: ಸಿದ್ದರಾಮಯ್ಯ

Update: 2020-01-16 12:58 GMT

ಬೆಂಗಳೂರು, ಜ.16: ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರೂಪಿತಗೊಂಡಿರುವ ಸಂವಿಧಾನದ ಆಶಯಗಳಿಗೆ ಮಾರಕವಾಗಿರುವ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ರಾಜ್ಯಾದ್ಯಂತ ರೂಪಗೊಳ್ಳುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ನೇತೃತ್ವ ವಹಿಸಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಆರೆಸ್ಸೆಸ್ ಭಾರತವನ್ನು ಹಿಂದೂರಾಷ್ಟ್ರ ಮಾಡಬೇಕೆಂದು ಷಡ್ಯಂತ್ರಗಳನ್ನು ರೂಪಿಸುತ್ತಿದೆ. ಹಿಂದೂರಾಷ್ಟ್ರವೆಂದರೆ ಬ್ರಾಹ್ಮಣ್ಯ, ಚಾತುವರ್ಣ ರಾಷ್ಟ್ರವಾಗಿದೆ. ಅದರ ಭಾಗವಾಗಿ ಸಿಎಎ, ಎನ್‌ಆರ್‌ಸಿ ಜಾರಿ ಮಾಡಿದ್ದಾರೆ. ಆದರೆ, ಭಾರತದ ಮೂಲ ತತ್ವವಿರುವುದೇ ಜಾತ್ಯತೀತತೆ ಹಾಗೂ ಬಹುತ್ವದಲ್ಲಿ. ಹೀಗಾಗಿ ಯಾವುದೇ ಕಾರಣಕ್ಕೂ ಭಾರತವನ್ನು ಹಿಂದೂರಾಷ್ಟ್ರವಾಗಲು ಈ ದೇಶದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸಿಎಎ, ಎನ್‌ಆರ್‌ಸಿ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿ ಮಾಡಲು ಉದ್ದೇಶಿಸಿರುವ ಜನವಿರೋಧಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾಯ್ದೆಗಳ ವಿರುದ್ಧ ಗ್ರಾಮಮಟ್ಟದಿಂದ ಪ್ರಾರಂಭಗೊಂಡು ರಾಜ್ಯಮಟ್ಟದವರೆಗೆ ಹೋರಾಟ, ಜಾಗೃತಿ ಸಭೆ ಹಾಗೂ ಕಾರ್ಯಾಗಾರಗಳನ್ನು ರೂಪಿಸಲು ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರಕ್ಕೆ ಬಹುಮತ ಇದ್ದರೂ ಜನವಿರೋಧಿ ಹಾಗೂ ಸಂವಿಧಾನದ ವಿಧಿ ವಿಧಾನಗಳಿಗೆ ಮಾರಕವಾಗಿರುವ ಕಾಯ್ದೆಗಳನ್ನು ರೂಪಿಸುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಂವಿಧಾನದ ಮೂಲ ತತ್ವಕ್ಕೆ ವಿರುದ್ದವಾದ ಕಾಯ್ದೆ ರೂಪಿಸಲು ಹೊರಟಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಚಳವಳಿಗೆ ಸಜ್ಜಾಗಿದೆ ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ದೇಶದಲ್ಲಿ ಬಿಜೆಪಿ ಸುಳ್ಳಿನ ಕಾರ್ಖಾನೆಯನ್ನು ಸ್ಥಾಪಿಸಿದ್ದಾರೆ. ಅದರ ಮೂಲಕ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ಮಾಡುವ ಮೂಲಕ ಬ್ರಾಹ್ಮಣಶಾಹಿ ಸಿದ್ಧಾಂತವನ್ನು ಜಾರಿ ಮಾಡಲು ಹೊರಟಿದ್ದಾರೆ. ಇದನ್ನು ವಿರೋಧಿಸಿ ದೇಶಾದ್ಯಂತ ದೊಡ್ಡ ಮಟ್ಟದ ಆಂದೋಲನ ಪ್ರಾರಂಭಗೊಂಡಿದೆ. ಇದರಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಭಾಗಿಯಾಗಲಿದೆ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಬಿಜೆಪಿ ಸರಕಾರ ಜಾರಿ ಮಾಡಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಮೂಲ ಸಂರಚನೆಗಳನ್ನೇ ನಾಶ ಮಾಡುವಂತಹದ್ದಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪ್ಘಾನಿಸ್ತಾನದ ಅಲ್ಪಸಂಖ್ಯಾತರ ಮುಸ್ಲಿಮೇತರರಿಗೆ ಪೌರತ್ವ ಕೊಡಲಾಗುವುದು ಎನ್ನುತ್ತಾರೆ. ಆದರೆ, ಶ್ರೀಲಂಕಾದಲ್ಲಿ ತಮಿಳರು ನಿರಾಶ್ರಿತರಾಗಿದ್ದಾರೆ. ಮಯನ್ಮಾರ್‌ನ ರೋಹಿಂಗ್ಯಾ ಮುಸ್ಲಿಮರಿಗೆ ಯಾಕೆ ಪೌರತ್ವದಿಂದ ಹೊರಗಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದೇಶವನ್ನು ಧರ್ಮಾಧಾರಿತವಾಗಿ ವಿಭಜಿಸಲು ಮುಂದಾಗಿದೆ. ಅದರ ಭಾಗವಾಗಿ ಸಿಎಎ, ಎನ್‌ಆರ್‌ಸಿ ಜಾರಿಗೆ ತಂದು, ಜನರಲ್ಲಿ ಮುಸ್ಲಿಮರ ಬಗ್ಗೆ ತಪ್ಪು ಸಂದೇಶಗಳನ್ನು ಬಿತ್ತುತ್ತಿದ್ದಾರೆ. ಹೀಗಾಗಿ ನಾವು ಹಳ್ಳಿ, ಹಳ್ಳಿಗಳಿಗೆ ತೆರಳಿ ಬಿಜೆಪಿಯ ಷಡ್ಯಂತ್ರಗಳನ್ನು ಜನತೆಗೆ ತಿಳಿಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಸುದರ್ಶನ್, ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ, ವಿ.ಆರ್.ಸುದರ್ಶನ್ ಮತ್ತಿತರರಿದ್ದರು.

'ಸುದೀರ್ಘ ಚಳವಳಿಗೆ ಕಾಂಗ್ರೆಸ್ ಸಜ್ಜು'
ಬಿಜೆಪಿ ಗೂಂಡಾ ಪಕ್ಷವಾಗಿ ಬದಲಾಗಿದ್ದು, ದೇಶದಲ್ಲಿ ರಕ್ತಪಾತವಾಗಿ ಸಾವು ನೋವುಗಳು ಸಂಭವಿಸಿದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ತಮ್ಮ ಆರೆಸ್ಸೆಸ್ ಸಿದ್ಧಾಂತಕ್ಕೆ ಅಂಟಿಕೊಂಡೇ ಇರುತ್ತಾರೆ. ಹೀಗಾಗಿ ಸಿಎಎ, ಎನ್‌ಆರ್‌ಸಿ ವಿರುದ್ಧದ ಹೋರಾಟ ಕೇವಲ ಒಂದೆರಡು ವರ್ಷಗಳಲ್ಲಿ ಮುಗಿಯುವಂತಹದ್ದಲ್ಲ. ಇದೊಂದು ಎರಡನೇ ಸ್ವಾತಂತ್ರ ಸಂಗ್ರಾಮವೆಂದರೆ ತಪ್ಪಾಗಲಾರದು. ಹೀಗಾಗಿ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವುದಕ್ಕಾಗಿ ನಡೆಯುತ್ತಿರುವ ಸುದೀರ್ಘ ಚಳವಳಿಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸಜ್ಜುಗೊಳ್ಳಬೇಕಿದೆ.
-ದಿನೇಶ್‌ ಗುಂಡೂರಾವ್, ರಾಜ್ಯಾಧ್ಯಕ್ಷ, ಕೆಪಿಸಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News