ಶೀಘ್ರ ಹಾಲಿನ ದರ ಹೆಚ್ಚಳ?

Update: 2020-01-16 13:09 GMT

ಬೆಂಗಳೂರು, ಜ.16: ನಂದಿನಿ ಹಾಲಿನ ದರ ಲೀಟರ್‌ಗೆ 2 ರಿಂದ 3 ರೂ. ಹೆಚ್ಚಳವಾಗುವ ಸಾಧ್ಯತೆ ಇದ್ದು, ಈ ಸಂಬಂಧ ಮೂರು ದಿನಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ನಿರ್ಧಾರ ಕೈಗೊಳ್ಳಲಿದೆ.

ದರ ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಎಲ್ಲ 14 ಒಕ್ಕೂಟಗಳು ಸಲ್ಲಿಸಿವೆ. ಜ.17ರಂದು ನಡೆಯಲಿರುವ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಸಾಧಕ-ಬಾಧಕ ಪರಿಶೀಲಿಸಲಾಗುವುದು.

ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆಗೂ ಚರ್ಚೆ ನಡೆಸಿ ಇನ್ನು ಮೂರು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಮೂರು ವರ್ಷಗಳಿಂದ ಹಾಲಿನ ದರ ಹೆಚ್ಚಳವಾಗಿಲ್ಲ. ಖಾಸಗಿ ಸಂಸ್ಥೆಗಳಿಗಿಂತ ಕೆಎಂಎಫ್ ಹಾಲು ಲೀಟರ್‌ಗೆ 8 ರಿಂದ 10 ರೂ. ಕಡಿಮೆಗೆ ಸಿಗುತ್ತಿದೆ. ಎಷ್ಟೇ ದರ ಹೆಚ್ಚಳವಾದರೂ ಅದನ್ನು ಹಾಲು ಉತ್ಪಾದಕ ರೈತರಿಗೆ ನೀಡಲಾಗುವುದು. ಇದಲ್ಲದೇ, ಸರಕಾರ ಸದ್ಯ ಹಾಲು ಉತ್ಪಾದಕರಿಗೆ ಲೀಟರ್‌ಗೆ ನೀಡುತ್ತಿರುವ 5 ರೂ.ಗಳ ಪ್ರೋತ್ಸಾಹ ಧನವನ್ನು 6 ರೂ.ಗಳಿಗೆ ಹೆಚ್ಚಿಸಬೇಕು ಎಂಬ ಮನವಿಯನ್ನೂ ಮುಖ್ಯಮಂತ್ರಿ ಅವರಿಗೆ ಮಾಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News