×
Ad

ಪೂರ್ಣಾವಧಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಆಯ್ಕೆ

Update: 2020-01-16 19:08 IST

ಬೆಂಗಳೂರು, ಜ.16: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಔಪಚಾರಿಕ ಚುನಾವಣೆಯಲ್ಲಿ ಮಂಗಳೂರು ಸಂಸದ ಹಾಗೂ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ರಾಜ್ಯ ಚುನಾವಣಾ ವೀಕ್ಷಕ ಹಾಗೂ ರಾಷ್ಟ್ರೀಯ ಚುನಾವಣಾ ಸಹ ಚುನಾವಣಾಧಿಕಾರಿ ಸಿ.ಟಿ.ರವಿ, ರಾಜ್ಯ ಚುನಾವಣಾಧಿಕಾರಿ ಅಶ್ವಥ್ ನಾರಾಯಣ್, ಉಪಚುನಾವಣಾಧಿಕಾರಿ ಹಾಲಪ್ಪ ಆಚಾರ್ ನಳಿನ್ ಕುಮಾರ್ ಕಟೀಲ್ ಆಯ್ಕೆಯನ್ನು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಪಕ್ಷವು ನನ್ನನ್ನು ವೀಕ್ಷಕನನ್ನಾಗಿ ಹಾಗೂ ಅಶ್ವತ್ಥ ನಾರಾಯಣ್ ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಿತ್ತು. ಈಗಾಗಲೇ 20 ಮಂದಿ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ ಎಂದರು.

ರಾಜ್ಯಾಧ್ಯಕ್ಷ ಹುದ್ದೆಗೂ ಚುನಾವಣೆ ನಡೆಸಬಹುದು ಎಂದು ಪಕ್ಷದ ರಾಷ್ಟ್ರೀಯ ಚುನಾವಣಾಧಿಕಾರಿ ಸೂಚಿಸಿದ ಹಿನ್ನೆಲೆಯಲ್ಲಿ, ನಾವು ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಿದ್ದೇವೆ. ಬಿಜೆಪಿ ಸಕ್ರಿಯ ಸದಸ್ಯರು ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಬಹುದಿತ್ತು. ಆದರೆ, ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ, ಪರಿಶೀಲನೆ ನಡೆಸಿ ನಳಿನ್ ಕುಮಾರ್ ಕಟೀಲ್‌ರನ್ನು ರಾಜ್ಯಾದ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಯುಕ್ತಗೊಳಿಸಿದ್ದರು. ಇವತ್ತು ನಡೆದ ಚುನಾವಣೆಯಲ್ಲಿ ನಾನು ಅಧಿಕೃತವಾಗಿ ಆಯ್ಕೆಯಾಗಿದ್ದೇನೆ ಎಂದರು.

ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಕರಾವಳಿ ಭಾಗದವನಾದ ನನಗೆ ರಾಜ್ಯದ ಸಂಪೂರ್ಣ ಪರಿಸ್ಥಿತಿ ಗೊತ್ತಿಲ್ಲ ಎಂದು ವಿಪಕ್ಷಗಳು ಟೀಕಿಸುತ್ತವೆ. ಆದರೆ, ಈಗಾಗಲೇ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ, ಪರಿಸ್ಥಿತಿ ಅವಲೋಕನ ಮಾಡಿದ್ದೇನೆ ಎಂದು ಅವರು ಹೇಳಿದರು.

ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ, 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಎದುರಿಸಿದ್ದೇನೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಎದುರಾಗುವಂತಹ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಪಕ್ಷ ಕನಿಷ್ಟ ಶೇ.80ರಷ್ಟು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಆಶಯದಂತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವಂತೆ ಪಕ್ಷವನ್ನು ಸಂಘಟಿಸುತ್ತೇನೆ. ಅದಕ್ಕಾಗಿ ಗುಜರಾತ್ ಮಾದರಿಯಲ್ಲಿ ಸ್ಟೇಜ್ ಪ್ರಮುಖ್‌ಗಳ ನೇಮಕ, ಪ್ರತಿ ಮತಗಟ್ಟೆ ಮಂಡಲಕ್ಕೂ ಅಧ್ಯಕ್ಷರ ನೇಮಕ ಮಾಡುತ್ತೇನೆ ಎಂದು ಅವರು ಹೇಳಿದರು.

ಈಗಾಗಲೇ ರಾಜ್ಯದ 58,700 ಮತಗಟ್ಟೆಗಳ ಪೈಕಿ 47,700 ಮತಗಟ್ಟೆಗಳ ಅಧ್ಯಕ್ಷರ ನೇಮಕವಾಗಿದೆ. 306 ಮಂಡಲದ ಪೈಕಿ 264 ಮಂಡಲಗಳಿಗೆ ಅಧ್ಯಕ್ಷರ ನೇಮಕವಾಗಿದೆ. ಅದೇ ರೀತಿ, 37 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 27 ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News