ಯಾರಿಗಾದರೂ ಬೇಸರವಾದರೆ ಕ್ಷಮೆ ಇರಲಿ: ಮುಖ್ಯಮಂತ್ರಿ ಯಡಿಯೂರಪ್ಪ
Update: 2020-01-16 20:12 IST
ಬೆಂಗಳೂರು, ಜ. 16: ‘ವಿವಿಧ ಸಮಾಜಗಳ ಒತ್ತಡ ಸರಕಾರದ ಮೇಲೆ ನಿರಂತರವಾಗಿ ಇರುತ್ತದೆ. ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಹೇಳಿಕೆ ಸಹಜ ಪ್ರಕ್ರಿಯೆ. ಇದರ ಬಗ್ಗೆ ಚರ್ಚೆ ಅನಾವಶ್ಯಕ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಣೆ ನೀಡಿದ್ದಾರೆ.
‘ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿ. ಎಲ್ಲ ಸ್ವಾಮೀಜಿಗಳು, ಸಾಧು-ಸಂತರು ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ ಮತ್ತು ನನ್ನ ಮೇಲೆ ವಿಶ್ವಾಸವಿದೆ. ನನ್ನ ಮೇಲೆ ಇದ್ದ ಸಲುಗೆ ಮತ್ತು ಪ್ರೀತಿಯಿಂದ ಇಂತಹ ಪ್ರತಿಕ್ರಿಯೆಗಳು ಸಹಜ’ ಎಂದು ಹೇಳಿದ್ದಾರೆ.
ಎಲ್ಲರೂ ನಮ್ಮವರೇ ಬೈದವರೆನ್ನ ಬಂಧುಗಳು ಎಂಬ ಬಸವಣ್ಣನವರ ಉಕ್ತಿಯಲ್ಲಿ ನಂಬಿಕೆ ಇಟ್ಟವನು. ಅಂದು ನಾನು ಆಡಿದ ಮಾತುಗಳಿಂದ ಯಾರಿಗಾದರು ಬೇಸರವಾದರೆ ಕ್ಷಮೆ ಇರಲಿ. ನಾಡಿನ ಶರಣರು, ಸಂತರು, ಸ್ವಾಮೀಜಿಗಳ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ ಎಂದು ಭಾವಿಸಿದ್ದೇನೆಂದು ಅವರು ತಿಳಿಸಿದ್ದಾರೆ.