ಶಿಕ್ಷಣ ಇಲಾಖೆ ನಿರ್ದೇಶಕರೊಂದಿಗೆ ಸಚಿವ ಸುರೇಶ್ ಕುಮಾರ್ ಸಭೆ

Update: 2020-01-16 15:15 GMT

ಬೆಂಗಳೂರು, ಜ.16: ಪ್ರಸಕ್ತ ಸಾಲಿನ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರೊಂದಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಭೆ ನಡೆಸಿದರು.

ಗುರುವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಪೂರ್ವ ಸಿದ್ಧತೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳು 1016 ತಾತ್ವಿಕ ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ 1014 ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು. ಒಟ್ಟು 6,80,510 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ ಎಂದರು.

ಆದುದರಿಂದ, ಈ ಕೂಡಲೆ ಪೂರ್ವಭಾವಿ ಕ್ರಮಗಳನ್ನು ಆರಂಭಿಸಬೇಕು. ಯಾವುದೇ ಸಂದರ್ಭದಲ್ಲಿಯೂ ಅತ್ಯಂತ ಜಾಗರೂಕವಾಗಿ ಪರೀಕ್ಷಾ ಪ್ರಕ್ರಿಯೆಯನ್ನು ನಡೆಸಬೇಕು. ಉನ್ನತ ಮೌಲ್ಯಮಾಪನಾ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕೆಂದು ಸುರೇಶ್ ಕುಮಾರ್ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಫೆಬ್ರವರಿ ತಿಂಗಳಲ್ಲಿ ಜಿಲ್ಲಾಧಿಕಾರಿಗಳು, ಖಜಾನಾಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಸಂಬಂಧಪಟ್ಟ ಅಧಿಕಾರಿಗಳ ಸಭೆ ಆಯೋಜಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸುರೇಶ್ ಕುಮಾರ್ ಸೂಚಿಸಿದರು.

ಪ್ರಾಯೋಗಿಕ ಪರೀಕ್ಷೆಯು ಜ.25 ರಿಂದ ಫೆ.10ರವರೆಗೆ ನಡೆಯಲಿದ್ದು, ಅದಕ್ಕೆ ಸಂಬಂಧಿಸಿದ ಅಭ್ಯರ್ಥಿ ಪಟ್ಟಿ, ಅಂಕ ಪಟ್ಟಿ ಹಾಗೂ ಉತ್ತರ ಪತ್ರಿಕೆಗಳನ್ನು ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಕೂಡಲೆ ರವಾನಿಸಬೇಕು ಎಂದು ಅವರು ಹೇಳಿದರು.

ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ನೇರವಾಗಿ ಆನ್‌ಲೈನ್ ಮೂಲಕ ಕೇಂದ್ರಕ್ಕೆ ರವಾನಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮವನ್ನು ಅವಲೋಕಿಸಿದ ಅವರು, ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷಾ ಸಮಯದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸೂಚಿಸಿದರು.

ಪ್ರಪ್ರಥಮ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಈ ಹಿಂದೆ ಉಪಯೋಗಿಸುತ್ತಿದ್ದ 24 ಪುಟಗಳ ಉತ್ತರ ಪತ್ರಿಕೆಗಳ ಬದಲಾಗಿ 40 ಪುಟಗಳ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಉತ್ತರ ಪತ್ರಿಕೆಗಳನ್ನು ನೀಡುವಲ್ಲಿ ಉಂಟಾಗುತ್ತಿದ್ದ ಗೊಂದಲವನ್ನು ನಿವಾರಿಸಲಾಗಿದೆ ಎಂದು ನಿರ್ದೇಶಕರು ವಿವರಿಸಿದರು.

ಗೌಪ್ಯವಸ್ತುಗಳ ನಿರ್ವಹಣೆಯನ್ನು ಈ ಹಿಂದೆ ಕೇಂದ್ರ ಕಚೇರಿಯಿಂದ ಮಾತ್ರ ನಿರ್ವಹಿಸಲಾಗುತ್ತಿದ್ದು, 2020ರ ಪರೀಕ್ಷೆಯಿಂದ ಕೇಂದ್ರ ಕಚೇರಿಯ ಜೊತೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಮಿನಿ ಕಂಟ್ರೋಲ್ ಯುನಿಟ್ ಅನ್ನು ಸ್ಥಾಪಿಸಲಾಗುವುದು ಎಂದು ನಿರ್ದೇಶಕರು ವಿವರಿಸಿದರು.

ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಹೊಸ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಕಳೆದ ಸಾಲಿನ ಡಿ.26ರಿಂದ ತಿದ್ದುಪಡಿಗಾಗಿ ಬಿಡುಗಡೆ ಮಾಡಲಾಗಿದ್ದು, ತಿದ್ದುಪಡಿಯ ನಂತರ ಅಂತಿಮ ಪ್ರವೇಶ ಪತ್ರಗಳನ್ನು ಜ.17ರಂದು ಆನ್‌ಲೈನ್ ಮುಖಾಂತರ ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪರೀಕ್ಷಾ ಕೇಂದ್ರಗಳಿಂದ ಪ್ರತಿದಿನ ಮಾಹಿತಿಯನ್ನು ಆನ್‌ಲೈನ್ ಮುಖಾಂತರ ಪಡೆಯಲು 1. ವಿದ್ಯಾರ್ಥಿಗಳ ಹಾಜರಾತಿ, ಗೈರುಹಾಜರಿ, ಪರೀಕ್ಷಾ ಅಕ್ರಮಗಳ ಬಗ್ಗೆ, 2. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಹಮುಖ್ಯ ಅಧೀಕ್ಷಕರು, ಉತ್ತರ ಪತ್ರಿಕಾ ಪಾಲಕರು, ಪರೀಕ್ಷಾ ಕಚೇರಿ ಅಧೀಕ್ಷಕರು, ಬ್ಲಾಕ್ ಅಧೀಕ್ಷಕರು, ವಿಶೇಷ ಜಾಗೃತದಳದ ಸದಸ್ಯರ ವಿವರಗಳ ಬಗ್ಗೆ, 3.ಉತ್ತರ ಪತ್ರಿಕೆ ಸರಬರಾಜು, ಉಪಯೋಗಿಸಿದ ಹಾಗೂ ಉಳಿದ ವಿವರಗಳ ಬಗ್ಗೆ ಹಾಗೂ 4. ಪ್ರತಿದಿನದ ಪ್ರಶ್ನೆ ಪತ್ರಿಕೆಗಳನ್ನು ಮಾರ್ಗಾಧಿಕಾರಿಗಳಿಂದ ಪಡೆದುಕೊಂಡ ಸಮಯ ಮತ್ತು ಇತರ ವಿವರಗಳು ಮತ್ತು ಉತ್ತರ ಪತ್ರಿಕೆಗಳನ್ನು ಅಂಚೆ ಕಚೇರಿಗೆ ರವಾನಿಸಿದ ಸಮಯ ಹಾಗೂ ವಿವರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಹೊಸದಾಗಿ ನಾಲ್ಕು ಸೇವಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅವರು ಹೇಳಿದರು.

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯ ನಂತರ ಪ್ರಕಟಿಸಲಾಗುವುದು. ಈಗಾಗಲೇ ಸುಮಾರು 35,156 ಮೌಲ್ಯಮಾಪಕರು ನೋಂದಾಯಿಸಿಕೊಂಡಿದ್ದಾರೆ ಎಂು ನಿರ್ದೇಶಕರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News