ಪೊಲೀಸ್ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳ ಹಸ್ತಕ್ಷೇಪ: ಪೊಲೀಸ್ ಇಲಾಖೆ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2020-01-16 15:28 GMT

ಬೆಂಗಳೂರು, ಡಿ.16: ರಾಜಕಾರಣಿಗಳ ಶಿಫಾರಸ್ಸಿನ ಮೇರೆಗೆ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಪೊಲೀಸ್ ಸಿಬ್ಬಂದಿ ಮಂಡಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಈ ಕುರಿತು ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಿಶಿಧರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಾದಿಸಿದ ವಕೀಲರು, ಪೊಲೀಸ್ ಅಧಿಕಾರಿಗಳನ್ನು ಜನಪ್ರತಿನಿಧಿಗಳ ಶಿಫಾರಸ್ಸಿನ ಮೇರೆಗೆ ವರ್ಗಾವಣೆ ಮಾಡುತ್ತಿಲ್ಲ. ಜನಪ್ರತಿನಿಧಿಗಳಿಗೆ ಹಸ್ತಕ್ಷೇಪಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಗೃಹ ಇಲಾಖೆಯ ಪ್ರಮಾಣ ತ್ರವನ್ನು ಪೀಠಕ್ಕೆ ಸಲ್ಲಿಸಿದರು.

ಅದನ್ನು ಪರಿಶೀಲಿಸಿದ ನ್ಯಾಯಪೀಠ, ಸುಪ್ರಿಂಕೋರ್ಟ್ ತೀರ್ಪಿನ ನಂತರವೂ ಜನಪ್ರತಿನಿಧಿಗಳ ಶಿಫಾರಸುಗಳಿಗೆ ಬೆಲೆಯಿದೆಯೇ. ಇಂತಹ ಶಿಫಾರಸುಗಳನ್ನು ನಿರ್ಲಕ್ಷಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪೊಲೀಸ್ ಸಿಬ್ಬಂದಿ ಮಂಡಳಿಗೆ ಸ್ಪಷ್ಟನೆ ನೀಡಬೇಕಾಗುತ್ತದೆ ಎಂದು ಹೇಳಿತು. ಅಲ್ಲದೆ, ಆ ಬಗ್ಗೆ ಸ್ಪಷ್ಟ ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಿ, ವಿಚಾರಣೆಯನ್ನು ಜ.24 ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ಸರಕಾರಗಳು ಜನಪ್ರತಿನಿಧಿಗಳ ಶಿಫಾರಸು ಪತ್ರಗಳನ್ನು ಆಧರಿಸಿ ಪೊಲೀಸ್ ವರ್ಗಾವಣೆ ಮಾಡುತ್ತಿವೆ. ಆ ಮೂಲಕ ಸುಪ್ರಿಂ ಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ಬಗ್ಗೆ ನ್ಯಾಯಾಲಯದ ಆದೇಶವಿದ್ದರೂ ಶಿಫಾರಸು ಪತ್ರಗಳನ್ನು ನೀಡುವುದು ನಿಂತಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು.

ಜನಪ್ರತಿನಿಧಿಗಳ ವರ್ಗಾವಣೆಗೆ ಶಿಫಾರಸು ಪತ್ರಗಳನ್ನು ನೀಡುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಆದರೆ, ಸರಕಾರವೇ ಈ ಬಗ್ಗೆ ತಾನು ಶಿಫಾರಸು ಪತ್ರಗಳನ್ನು ಪರಿಗಣಿಸುವುದಿಲ್ಲವೆಂದು ಭರವಸೆ ನೀಡಬೇಕು. ಸುಪ್ರಿಂ ಕೋರ್ಟ್ ತೀರ್ಪು ಅತ್ಯಂತ ಸ್ಪಷ್ಟವಾಗಿದ್ದು, ಯಾವುದೇ ಕಾರಣಕ್ಕೂ ಪೊಲೀಸರ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳು ಮಧ್ಯಪ್ರವೇಶುವಂತಿಲ್ಲ ಎಂದು ನ್ಯಾಯಪೀಠ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News