ಈಡಿ ಸಮನ್ಸ್ ಜಾರಿ ಪ್ರಕರಣ: ದಾಖಲೆ ಸಲ್ಲಿಸಿದ ಮಾಜಿ ಸಚಿವ ಜಾರ್ಜ್

Update: 2020-01-16 15:40 GMT

ಬೆಂಗಳೂರು, ಜ.16: ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾದ ಆರೋಪ ಪ್ರಕರಣ ಸಂಬಂಧ ಮಾಜಿ ಸಚಿವ ಕೆ.ಜೆ. ಜಾರ್ಜ್ ಇಲ್ಲಿನ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ (ಈಡಿ) ಕಚೇರಿಗೆ ವಿಚಾರಣೆಗೆ ಹಾಜರಾಗಿ ಆಸ್ತಿ ದಾಖಲಾತಿ ಸಲ್ಲಿಸಿದರು.

ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ತಮ್ಮ ಲೆಕ್ಕಪರಿಶೋಧಕರ ಜತೆ ಈಡಿ ಕಚೇರಿಗೆ ಹಾಜರಾದ ಜಾರ್ಜ್ ಅವರನ್ನು ಈಡಿ ಡೆಪ್ಯುಟಿ ಡೆರೆಕ್ಟರ್ ರಾಹುಲ್ ಸಿನ್ಹಾ ಮತ್ತು ಇತರ ಅಧಿಕಾರಿಗಳು ಸತತ 4 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿದರು.

ಜಾರ್ಜ್ ಕುಟುಂಬ ಸದಸ್ಯರ ಆದಾಯ, ಹೂಡಿಕೆಗಳು, ಐಟಿ ರಿಟರ್ನ್ಸ್ ಸಲ್ಲಿಸಿರುವ ದಾಖಲೆ ಪತ್ರಗಳನ್ನು ಈಡಿ ಅಧಿಕಾರಿಗಳ ತಂಡ ಪರಿಶೀಲನೆ ಪ್ರಕ್ರಿಯೆ ಜರುಗಿಸಿತು. 2005-06 ವಾರ್ಷಿಕ ಸಾಲಿನ ಐಟಿ ರಿಟರ್ನ್ಸ್ ಜತೆಗೆ ಆಡಿಟ್ ಬ್ಯಾಲೆನ್ಸ್ ಶೀಟ್ ಪರಿಶೀಲನೆ ನಡೆಸಲಾಯಿತು ಎಂದು ತಿಳಿದುಬಂದಿದೆ.

ನಾನು ದೋಷಿಯಲ್ಲ: ಜಾರ್ಜ್
ಬೆಂಗಳೂರು, ಜ.16: ಈಡಿ ಅಧಿಕಾರಿಗಳು ಕೇಳಿರುವ ಪ್ರಶ್ನೆಗಳಿಗೆ ಕಾನೂನು ಬದ್ಧವಾಗಿ ಉತ್ತರಿಸಿದ್ದು, ವಿಚಾರಣೆಗೆ ಕರೆದ ಕೂಡಲೇ ನಾನು ದೋಷಿ ಅಲ್ಲ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಈಡಿ ಕಚೇರಿಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಬೇಕಾದರೂ, ಯಾರ ಮೇಲೆ ಬೇಕಾದರೂ ದೂರು ನೀಡಬಹುದು. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಮಸಿ ಬಳಿಯೋಕೆ ಕೆಲವರು ಕಾಯುತ್ತಿರುತ್ತಾರೆ. ಇನ್ನೂ ಕೆಲ ದಾಖಲೆಗಳನ್ನು ಕೇಳಿದ್ದು, ಮುಂದಿನ ದಿನಗಳಲ್ಲಿ ನೀಡುತೇನೆ ಎಂದರು.

ಈಡಿ ಯಾವುದೇ ದಾಖಲೆ ಕೇಳಿದರೂ ನಾನು ಸಲ್ಲಿಸಲಿದ್ದೇನೆ. ಅಲ್ಲದೆ, ನಮ್ಮ ಕುಟುಂಬದವರಿಗೆ ಸಮನ್ಸ್ ನೀಡಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಏನಿದು ಪ್ರಕರಣ?
ಕೆ.ಜೆ ಜಾರ್ಜ್ ಅವರು ಪತ್ನಿ, ಮಕ್ಕಳು ಹಾಗೂ ಅಳಿಯನ ಹೆಸರಿನಲ್ಲಿ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ ಎನ್ನಲಾದ ಆಸ್ತಿಯ ವಿವರ ಮತ್ತು ದಾಖಲೆಗಳ ಸಮೇತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಈಡಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಸಂಬಂಧ ಈಡಿ ಇತ್ತೀಚಿಗಷ್ಟೇ ಸಮನ್ಸ್ ಜಾರಿಗೊಳಿಸಿ ಜ.16ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News