ಬಾಳುಗೋಡುವಿನಲ್ಲಿ ನಿವೇಶನ ರಹಿತರ ಪ್ರತಿಭಟನೆ: ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಅಹೋರಾತ್ರಿ ಧರಣಿಯ ಎಚ್ಚರಿಕೆ

Update: 2020-01-16 16:26 GMT

ಮಡಿಕೇರಿ,ಜ.16: ವೀರಾಜಪೇಟೆ ತಾಲ್ಲೂಕಿನ ಬಾಳುಗೋಡುವಿನ ಪರಂಬು ಪೈಸಾರಿಯಲ್ಲಿ ಕಂದಾಯ ಇಲಾಖೆಯ ಕಾರ್ಯಾಚರಣೆಯಿಂದ ಭೂಮಿ ಕಳೆದುಕೊಂಡ 55 ಕ್ಕೂ ಹೆಚ್ಚಿನ ಕುಟುಂಬಗಳು ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನು ಮುಂದುವರೆಸಿದ್ದು, ಬೇಡಿಕೆ ಈಡೇರದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಪರಂಬು ಪೈಸಾರಿಯಲ್ಲಿದ್ದ 55 ಕ್ಕೂ ಹೆಚ್ಚಿನ ಕುಟುಂಬಗಳ ಗುಡಿಸಲುಗಳನ್ನು ಕಂದಾಯ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತೆರವುಗೊಳಿಸಿದ್ದರು. ಇದರಿಂದ ಅಸಮಾಧಾನಗೊಂಡ ಅಲ್ಲಿನ ನಿವಾಸಿಗಳು ನಿವೇಶನಕ್ಕೆ ಆಗ್ರಹಿಸಿ, ಮತ್ತೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ಧರಣಿ ನಿರತರಿಗೆ ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ, ಬಹುಜನ ಕಾರ್ಮಿಕ ಸಂಘ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ತಮ್ಮ ಬೆಂಬಲ ಸೂಚಿಸಿದ್ದು, ಸೂರು ಒದಗಿಸಿಕೊಡುವಂತೆ ಸರ್ಕಾರವನ್ನು ಮತ್ತು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ. 

ಪಿ.ಎಸ್.ಮಹೇಶ್ ಹಾಗೂ ಗಿರಿಜನ ಅಭಿವೃದ್ಧಿ ಇಲಾಖೆಯ ಗುರು ಶಾಂತಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್.ಜಿ.ಮಂಜುನಾಥ್, ಕಂದಾಯ ಇಲಾಖೆಯ ಅಧಿಕಾರಿ ಪಳಂಗಪ್ಪ ಮತ್ತು ಸಿಬ್ಬಂದಿಗಳು, ಬಿಟ್ಟಂಗಾಲ ಗ್ರಾಮ ಪಂಚಾಯ್ತಿ ಪಿ.ಡಿ.ಓ. ಸ್ವರೂಪ, ಗ್ರಾಮ ಪಂಚಾಯತ್ ಅಧ್ಯಕ್ಷ ಬೆಳ್ಯಪ್ಪ ಮತ್ತು ಸದಸ್ಯರು ಭೇಟಿ ನೀಡಿ, ಸರ್ಕಾರಿ ಜಾಗದಿಂದ ತೆರಳುವಂತೆ ಸೂಚಿಸಿದರಾದರು, ಪ್ರತಿಭಟನಾಕಾರರು ಅದಕ್ಕೆ ಜಗ್ಗದೆ, ನಿವೇಶನ ನೀಡುವವರೆಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಹೋರಾಟಗಾರ ಪಳನಿ ಪ್ರಕಾಶ್ ಮಾತನಾಡಿ, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳಿಂದ ಸ್ಪಂದನೆ ದೊರಕಿಲ್ಲ. ಆದ್ದರಿಂದ ಹೋರಾಟದ ಮೂಲಕ ತಮ್ಮ ಹಕ್ಕು ಪಡೆಯಲು ಮುಂದಾಗಿದ್ದೇವೆ. ನಿವೇಶನ ಒದಗಿಸಿಕೊಡುವಲ್ಲಿಯವರೆಗೆ ಧರಣಿ ಮುಂದುವರೆಯುತ್ತದೆ ಎಂದರು. 

ಭೂಮಿ ಮತ್ತು ವಸತಿ ಹೊರಾಟ ಸಮಿತಿ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ಹೇಮಂತ್ ಸುಖ್‍ದೇವ್ ಮಾತನಾಡಿ, ವಸತಿ ವಂಚಿತರಿಗೆ ತಲಾ 5 ಸೆಂಟ್ಸ್ ಜಾಗ ಒದಗಿಸಿಕೊಡುವಂತೆ ಸ್ಥಳೀಯ ಆಡಳಿತ ಮತ್ತು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇವೆ ಎಂದರು. ಡಿ.ಎಸ್.ಎಸ್ ಮುಖಂಡ ಪರಶುರಾಮ್, ಬಹುಜನ ಕಾರ್ಮಿಕ ಸಂಘಟನೆಯ ಮುಖಂಡರಾದ ಮೊಣ್ಣಪ್ಪ ಅವರುಗಳು ಧರಣಿ ನಿರತರ ಪರವಾಗಿ ಮಾತನಾಡಿದರು.

ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ತಹಸೀಲ್ದಾರ್ ಪಿ.ಎಸ್. ಮಹೇಶ್, ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಾಣ ಕಾನೂನು ಬಾಹಿರ. ವಸತಿ ರಹಿತರು ಆಯಾಯ ಪಂಚಾಯತ್ ಗೆ ಅರ್ಜಿ ಸಲ್ಲಿಸಬೇಕು. ನಂತರ ಅರ್ಹ ಫಲಾನುಭವಿಗಳಿಗೆ ಪಂಚಾಯತ್ ಗುರುತಿಸಿರುವ ಸ್ಥಳದಲ್ಲಿ ನಿವೇಶನ ನೀಡಿ, ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಗುಡಿಸಲುಗಳನ್ನು ತೆರವು ಮಾಡಿದ ಬಳಿಕ ಮತ್ತೆ ಗುಡಿಸಲು ನಿರ್ಮಾಣ ಕಾನೂನಿಗೆ ವಿರುದ್ಧವೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News