"'ಫ್ರೀ ಕಾಶ್ಮೀರ್' ಭಿತ್ತಿ ಪತ್ರ ಹಿಡಿದ ಯುವತಿ ಪರ ವಕಾಲತ್ತು ವಹಿಸುವುದಿಲ್ಲ ಎಂಬ ನಿರ್ಧಾರ ಹಿಂಪಡೆಯಿರಿ"

Update: 2020-01-16 16:32 GMT
ನಳಿನಿ

ಮೈಸೂರು,ಜ.17: ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ್' ಎಂಬ ಭಿತ್ತಿ ಪತ್ರ ಹಿಡಿದ ಯುವತಿ ಬಿ.ನಳಿನಿ ಮತ್ತು ಇತರೆ ಆರೋಪಿಗಳಿಗೆ ಸಂಘದ ಸದಸ್ಯ ವಕೀಲರು ವಕಾಲತ್ತು ವಹಿಸುವುದಿಲ್ಲ ಎಂಬ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಪ್ರಗತಿಪರ ಚಿಂತಕರುಗಳ ನಿಯೋಗ ವಕೀಲರ ಸಂಘದ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ನಗರದ ವಕೀಲರ ಸಂಘದ ಕಚೇರಿಯಲ್ಲಿ ಗುರುವಾರ ವಕೀಲರ ಸಂಘದ ಅಧ್ಯಕ್ಷ ವಿಜಯಕುಮಾರ್ ಅವರನ್ನು ಭೇಟಿ ಮಾಡಿದ ಪ್ರಗತಿಪರ ಚಿಂತಕರುಗಳು, ಯುವತಿ ಬಿ.ನಳಿನಿ ಅವರ ಮೇಲಿನ ಎಫ್.ಐ.ಆರ್ ಸಂದರ್ಭದಲ್ಲಿ ವಕೀಲ ಪೃಥ್ವಿ ಕಿರಣ್ ಶೆಟ್ಟಿ ಅವರು ನಿರೀಕ್ಷಣಾ ಜಾಮೀನು ಕೊಡಿಸಿ ನಂತರ ವೈಯಕ್ತಿಕ ಕಾರಣಗಳಿಂದ ವಕಾಲತ್ತು ಹಿಂಪಡೆದಿದ್ದಾರೆ. ಜೊತೆಗೆ ತಮ್ಮ ಸಂಘದ ಕೆಲವು ವಕೀಲ ಸದಸ್ಯರು ನೀಡಿದ ಮನವಿಯ ಮೇರೆಗೆ ತಮ್ಮ ಸಂಘದ ಕಾರ್ಯಕಾರಿಣಿ ಮಂಡಳಿಯು ನಳಿನಿ ಬಿ. ಅವರ ಪರವಾಗಲಿ ಅಥವಾ ಇತದರ ಆರೋಪಿಗಳ  ಪರವಾಗಲಿ ವಕಾಲತ್ತು ವಹಿಸದಂತೆ ತಾವು ತೆಗೆದುಕೊಂಡ ತೀರ್ಮಾನವು ಮಾಧ್ಯಮಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ. ತಮ್ಮ ಸಂಘವು ತೆಗೆದುಕೊಂಡ ತೀರ್ಮಾನವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಆರೋಪಿಯನ್ನು ಎಫ್‍ಐಆರ್ ಹಂತದಲ್ಲೇ  ಅಪರಾಧಿ ಎಂದು ಬಿಂಬಿಸುವುದು ನಮ್ಮ ದೇಶದ ಕಾನೂನು ಸುವ್ಯವಸ್ಥೆಯ ವಿರುದ್ಧವಾಗಿದೆ. ಆದುದರಿಂದ ತಾವು ತೆಗೆದುಕೊಂಡ ತೀರ್ಮಾವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ನಳಿನಿ ಬಿ. ಎಂಬ ದಲಿತ ಯುವತಿಯ ಮೇಲೆ ದೇಶದ್ರೋಹ ಎಂಬ ಪ್ರಕರಣವನ್ನು ವಿನಾ ಕಾರಣ ಹೊರಿಸಲಾಗಿದೆ. ಅದನ್ನು ಸಾಬೀತು ಪಡಿಸಲು ಆಕೆಗೆ ವಕೀಲರ ಸಹಕಾರ ಅನಿವಾರ್ಯ, ಆಕೆಯ ಸಂಕಷ್ಟದ ಈ ಸಂದರ್ಭದಲ್ಲಿ ತಾವುಗಳು ಸಹಕಾರ ನೀಡಿ ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳುವಂತೆ ಕೋರಿದರು.

ಪ್ರತಿಭಟನೆ ನಡೆಸಿದ ಕೆಲವು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿ ಹೇಳಿಕೆಗಳನ್ನು ಪಡೆದಿರುತ್ತಾರೆ. ಜೆಎನ್‍ಯು ವಿಶ್ವವಿದ್ಯಾನಿಲಯದಲ್ಲಿ ನಡೆದ ಅಮಾನುಷ ಹಲ್ಲೆ ವಿರುದ್ಧ ಪ್ರತಿಭಟಿಸುವ ಅವರ ಹಕ್ಕನ್ನು ನಾವು ಗೌರವಿಸುತ್ತೇವೆ. ಇಂತಹ ಪ್ರತಿಭಟನೆಗಳು ಪ್ರಜಾಪ್ರಭುತ್ವವನ್ನು ಜೀವಂತವಾಗಿ ಮುನ್ನಡೆಸುತ್ತವೆ. 'ಫ್ರೀ ಕಾಶ್ಮೀರ್' ಎಂಬ ಭಿತ್ತಿ ಪತ್ರದ ಹೆಸರಿನಲ್ಲಿ ಈಗ ಈ ವಿದ್ಯಾರ್ಥಿಗಳನ್ನು ಭಯದ ವಾತಾರವಣಕ್ಕೆ ನೂಕಿದಂತಾಗಿದೆ. ತಮ್ಮ ಸಂಘದ ನಿರ್ಧಾರವು ಅವರಲ್ಲಿ ಮತ್ತಷ್ಟು ಆಘಾತವನ್ನು ಉಂಟುಮಾಡಿದೆ. ಆದುದರಿಂದ ಯುವ ಪೀಳಿಗೆಯ ಹಿತದೃಷ್ಟಿಯಿಂದ ತಮ್ಮ ನಿರ್ಧಾರವನ್ನು ಹಿಂಪಡೆದು ಅವರಿಗೆ ನ್ಯಾಯಸಮ್ಮತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಿಯೋಗದಲ್ಲಿ ಪ್ರಗತಿಪರ ಚಿಂತಕರುಗಳಾದ ಪ.ಮಲ್ಲೇಶ್, ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಪ್ರೊ.ಶಬ್ಬೀರ್ ಮುಸ್ತಾಫ, ಕೆ.ಬಸವರಾಜು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ, ಕೆ.ಆರ್.ಗೋಪಾಲಕೃಷ್ಣ, ಸಿಪಿಐಎಂ ಕೆ.ಬಸವರಾಜು, ಜಿ.ರಾಜೇಂದ್ರ, ಸಿ.ಟಿ.ಆಚಾರ್ಯ, ಶಂಭುಲಿಂಗಸ್ವಾಮಿ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News