ಸಂಪುಟ ರಚನೆಯಲ್ಲಿ ಯಾವುದೇ ಕಗ್ಗಂಟು ಇಲ್ಲ: ಶಾಸಕ ಎಸ್.ಎ.ರಾಮದಾಸ್

Update: 2020-01-16 16:46 GMT

ಮೈಸೂರು,ಜ.16: ಸಂಪುಟ ರಚನೆಯಲ್ಲಿ ಯಾವುದೇ ಕಗ್ಗಂಟು ಇಲ್ಲ ಎಂದು ಶಾಸಕ ಎಸ್.ಎ.ರಾಮದಾಶ್ ಸ್ಪಷ್ಟಪಡಿಸಿದರು. ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಚಿವ ಸ್ಥಾನ ಸ್ಪರ್ಧೆ ಇರುವಂತಹ ಜಾಗ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದೆ. ನಾವೆಲ್ಲ ಅದಕ್ಕೆ ಬದ್ಧರಾಗಿರುತ್ತೇವೆ. ಸಂಪುಟದಲ್ಲಿ ಆಪೇಕ್ಷೆ ಪಡುವವರು ಹೇಳಿಕೆ ನೀಡೋದರಲ್ಲಿ ತಪ್ಪೇನಿಲ್ಲ. ಯಡಿಯೂರಪ್ಪ ನವರು ಸ್ವತಂತ್ರರು. ಅವರು ನಮ್ಮ ತಂದೆ ಸ್ಥಾನದಲ್ಲಿ ಇದ್ದಾರೆ. ಅವರು ಯಾವುದೇ ನಿರ್ಧಾರ ತಗೆದುಕೊಂಡರು ನಾವು ಬದ್ಧರಾಗಿರುತ್ತೇವೆ ಎಂದರು.

ಸಚಿವ ಸಂಪುಟ ರಚನೆ ವಿಚಾರದಲ್ಲಿ ವಿಶ್ವನಾಥ್ ಕೊಟ್ಟ ಎಚ್ಚರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಶ್ವನಾಥ್ ನಮ್ಮ ತಂದೆಯ ಸ್ಥಾನದಲ್ಲಿ ಇದ್ದಾರೆ. ಅವರು ಎಲ್ಲಾ  ಪಕ್ಷದಲ್ಲಿಯೂ ಆಡಳಿತ ವ್ಯವಸ್ಥೆಗಳನ್ನು ತಿಳಿದುಕೊಂಡಿದ್ದಾರೆ. ಅವರು ಯಾವ ದೃಷ್ಟಿಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಸರ್ಕಾರಕ್ಕಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂದು ಕೊಂಡವರು ನಾವು. ನಾವು ಪಕ್ಷವನ್ನು ಉಳಿಸಿಕೊಳ್ಳುವ ಬಗ್ಗೆ ಇರುತ್ತೇವೆ ಹೊರತು ಹಿರಿಯರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಶಕ್ತಿಯುತವಾಗಿದೆ. ಬಿಜೆಪಿಯಂತಹ ಹಾಲಿನ ವಾತಾವರಣದಲ್ಲಿ ವಿಶ್ವನಾಥ್ ಸಕ್ಕರೆಯಂತೆ ಕರಗುತ್ತಾರೆ. ಬಳಿಕ ಅವರು ನಮ್ಮ ಜೊತೆ ಇರುತ್ತಾರೆ ಎಂದರು.

ಮೇಯರ್ ಗಾದಿ ಹಿಡಿಯಲು ನಾವು ಯಾವತ್ತೂ ಪ್ರಯತ್ನ ಮಾಡುತ್ತಿಲ್ಲ. ಆಪರೇಷನ್ ಕಮಲಾನೂ ಮಾಡಲ್ಲ. ಕಾಂಗ್ರೆಸ್, ಜೆಡಿಎಸ್ ಮೈತ್ರಿಯನ್ನು ಈ ಬಾರಿಯೂ ಮುಂದುವರಿಸಿದೆ. ಅವರಲ್ಲಿಯೇ ಇರುವ ಸಮಸ್ಯೆಗಳಿಂದ ರೆಸಾರ್ಟ್ ಗೆ ಹೋಗುತ್ತಿದ್ದಾರೆ. ನಾವು ಆಪರೇಷನ್ ಕಮಲ ಮಾಡುತ್ತಿಲ್ಲ, ಮಾಡೋದು ಇಲ್ಲ. ನಾವು ವಿರೋಧ ಪಕ್ಷವಾಗಿಯೇ ಇರುತ್ತೇವೆ. ಸಕಾರಾತ್ಮಕ ಆಡಳಿತಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಯಾವ ರೀತಿ ಇರಬೇಕೆಂಬುದನ್ನು ನಿರ್ಧರಿಸಲು  ನ.17ರಂದು ಸಭೆ ಕರೆದಿದ್ದೇವೆ. ಸಭೆಯಲ್ಲಿ ವಿಶೇಷವಾಗಿ ಜವಾಬ್ದಾರಿ ನೀಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತೇವೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News