ಬೆಂಗಳೂರು: ಶೈಕ್ಷಣಿಕ ಸಂಸ್ಥೆಗಳ ಮೇಲಿನ ದಾಳಿ ಖಂಡಿಸಿ ಮೌನ ಪ್ರತಿಭಟನೆ

Update: 2020-01-16 17:37 GMT

ಬೆಂಗಳೂರು, ಜ.16: ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳ ಮೇಲಿನ ದಾಳಿ ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ದಮನಕಾರಿ ನೀತಿಗಳನ್ನು ಖಂಡಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳಿಂದು ನಗರದಲ್ಲಿ ವೌನ ಪ್ರತಿಭಟನೆ ನಡೆಸಿದರು.

ನಗರದ ಪುರಭವನದ ಎದುರು ಜಮಾಯಿಸಿದ್ದ ವಿದ್ಯಾರ್ಥಿಗಳು, ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯ, ಜ್ಯೋತಿನಿವಾಸ್ ಕಾಲೇಜು, ಸೃಷ್ಟಿ ಆರ್ಟ್ ಕಾಲೇಜು ಸೇರಿದಂತೆ ಕಾಲೇಜು, ವಿವಿಗಳ ಮೇಲೆ ಬಿಜೆಪಿ, ಸಂಘಪರಿವಾರ ಹಾಗೂ ಕೋಮುವಾದಿ ಸಂಘಟನೆಗಳ ದಾಳಿಯನ್ನು ಖಂಡಿಸಿ ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು, ಕಾಲೇಜಿಗೆ ಅಥವಾ ಆ ಸಂಸ್ಥೆಗೆ ಅಷ್ಟೇ ಸೀಮಿತವಾಗಬೇಕು. ಅಲ್ಲಿ, ದೇಶದ ವಿಷಯಗಳನ್ನು ಚರ್ಚಿಸಬಾರದು ಎಂದು ನಿರ್ಬಂಧ ಹೇರಿಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಯೋಚಿಸುವ, ಪ್ರಶ್ನಿಸುವ ಮನೋಭಾವವನ್ನು ದಮನ ಮಾಡಲು ಸರಕಾರ ಯತ್ನಿಸುತ್ತಿದೆ ಎಂದು ಆಪಾದಿಸಿದರು.

ದೇಶದ ಪ್ರತಿಯೊಬ್ಬರೂ ಪ್ರತಿಭಟಿಸುವ ಹಕ್ಕು ಸಂವಿಧಾನದಲ್ಲಿಯೇ ನೀಡಲಾಗಿದೆ. ಆದರೆ, ಅಧಿಕಾರದಲ್ಲಿರುವ ಸರಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ವಿದ್ಯಾರ್ಥಿಗಳ ನ್ಯಾಯಯುತ ಹಕ್ಕನ್ನು ದಮನಿಸಲು ಯತ್ನಿಸುತ್ತಿದೆ. ಅದಕ್ಕಾಗಿ, ಅವರು ಕಾನೂನು ವಿರೋಧಿ ಮಾರ್ಗಗಳನ್ನು ಅನುಸರಿಸಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈ ವೇಳೆ ಮಾತನಾಡಿದ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಕೇಂದ್ರ ಸರಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ವಿಶ್ವವಿದ್ಯಾಲಯ ಮೇಲೆ ದಾಳಿ ಮಾಡಿಸುತ್ತಿದೆ. ವಿದ್ಯಾರ್ಥಿಗಳು ರಾಜಕೀಯವಾಗಿ ಆಲೋಚನೆ ಮಾಡುವುದೇ ತಪ್ಪು ಎಂಬಂತೆ ಬಿಂಬಿಸಿರುವುದು ಸರಿಯಲ್ಲ ಎಂದು ಹೇಳಿದರು.

ಹಲವು ವಿಶ್ವವಿದ್ಯಾಲಯಗಳಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರೇ ಅಧಿಕ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರೆಲ್ಲರನ್ನೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ದುರುದ್ದೇಶದಿಂದ ಕೇಂದ್ರ ಸರಕಾರ ಶೈಕ್ಷಣಿಕ ಸಂಸ್ಥೆಗಳ ಮೇಲೆ ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ. ಇದಕ್ಕೆ ಕೆಲವೊಂದಿಷ್ಟು ಕೋಮುವಾದಿ ಗುಂಪುಗಳು ಕೈಜೋಡಿಸಿರುವುದು ಅಪಾಯಕಾರಿ ಬೆಳವಣಿಗೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News