ವೃತ್ತಿಪರ ಕೋರ್ಸ್‌ಗಳ ಸಿಇಟಿ ಪರೀಕ್ಷೆ ಆನ್‌ಲೈನ್‌ಗೆ ಚಿಂತನೆ

Update: 2020-01-16 17:42 GMT

ಬೆಂಗಳೂರು, ಜ.16: ಎಂಜಿನಿಯರಿಂಗ್ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಆನ್‌ಲೈನ್ ನಡೆಸಲು ಪೂರ್ವ ಸಿದ್ಧತೆ ಆರಂಭಿಸಿದೆ.

ರಾಜ್ಯ ಸರಕಾರವು ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಆನ್‌ಲೈನ್ ಪರೀಕ್ಷೆಗೆ ಮುಂದಾಗಿದ್ದು, ನೀಟ್ ಮಾದರಿಯಲ್ಲಿ ಮೂರು ಗಂಟೆ ಅವಧಿಯಲ್ಲಿ ಪರೀಕ್ಷೆ ಮುಗಿಸಲು ಒಂದೇ ಪ್ರಶ್ನೆ ಪತ್ರಿಕೆ ರೂಪಿಸಲು ಮುಂದಾಗಿದೆ. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ವರ್ಷ ಎಪ್ರಿಲ್ 22 ಮತ್ತು 23 ರಂದು ಸಿಇಟಿ ನಡೆಸಲು ವೇಳಾಪಟ್ಟಿ ನಿಗದಿಪಡಿಸಿದೆ. ಹೀಗಾಗಿ, ಈ ವರ್ಷ ಆನ್‌ಲೈನ್ ಪರೀಕ್ಷೆ ನಡೆಯಲಿದೆ. ಈ ಕುರಿತು ಕೆಇಎ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಪ್ರತಿ ವರ್ಷ 1.90 ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆಯುತ್ತಾರೆ. ಪ್ರಸ್ತುತ ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳಿಗೆ ಎರಡು ದಿನ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲು ಪ್ರಸ್ತುತ 25 ಸಾವಿರ ಕಂಪ್ಯೂಟರ್‌ಗಳಷ್ಟೇ ಲಭ್ಯವಿರುವುದರಿಂದ 2 ಲಕ್ಷ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸಲು 10 ದಿನ ಬೇಕಾಗುತ್ತದೆ. ಹೀಗಾಗಿ 4 ವಿಷಯಗಳ ಪ್ರಶ್ನೆಗಳನ್ನು ಸಮಾನವಾಗಿ ಆಯ್ಕೆ ಮಾಡಿಕೊಂಡು ಒಂದೇ ಪ್ರಶ್ನೆಪತ್ರಿಕೆ ರೂಪಿಸಿ, ಮೂರು ಗಂಟೆಗಳಲ್ಲಿ ಪರೀಕ್ಷೆ ಮುಗಿಸಲು ಸರಕಾರ ಚಿಂತನೆ ನಡೆಸಿದೆ.

ಪ್ರಶ್ನೆ ಪತ್ರಿಕೆ ಕ್ರಮ ಬದಲು: ಆನ್‌ಲೈನ್ ಮೂಲಕ ಪರೀಕ್ಷೆ ನಡೆಸುವ ಹಿನ್ನೆಲೆಯಲ್ಲಿ ಎರಡು ಲಕ್ಷ ಕಂಪ್ಯೂಟರ್‌ಗಳ ಅಗತ್ಯವಿದೆ. ಇದೇನು ಸಮಸ್ಯೆಯಿಲ್ಲವಾದರೂ, ಈಗಿರುವ ಸಿಇಟಿ ಮಾದರಿಯಲ್ಲಿ ನಾಲ್ಕು ವಿಷಯಗಳ ಪ್ರಶ್ನೆ ಪತ್ರಿಕೆಗಳಿಗೆ 3 ಗಂಟೆ ಅವದಿಯಲ್ಲಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ.
ಅಲ್ಲದೆ, 10 ದಿನ ಆನ್‌ಲೈನ್ ಪರೀಕ್ಷೆ ನಡೆಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸಮಾನವಾಗಿ ಆಯ್ಕೆ ಮಾಡಿಕೊಂಡು ಒಂದೇ ಪ್ರಶ್ನೆ ಪತ್ರಿಕೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯಕ್ಕೆ ಮುಂದಾಗಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಣ ತಜ್ಞರಿಂದ ಸ್ವೀಕರಿಸುವ ಆಕ್ಷೇಪಣೆಗಳನ್ನು ಆಧಾರವಾಗಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯಲ್ಲಿ ಪಾರದರ್ಶಕತೆ ಹಾಗೂ ಸುರಕ್ಷತೆಯನ್ನು ಹೆಚ್ಚಿಸಿ ಹೊರ ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಅರ್ಹ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹೆಚ್ಚಿಸಲು ಪ್ರಾಧಿಕಾರದ ಸಂಪನ್ಮೂಲ ಬಳಸಿ ಆನ್‌ಲೈನ್ ಮೂಲಕ ಸಿಇಟಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ 2019-20ನೇ ಸಾಲಿನ ಬಟ್‌ನಲ್ಲಿ ಘೋಷಣೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News