ಚಿಕ್ಕಮಗಳೂರು: ಪಿ.ಎಂ.ಎಸ್.ವೈ.ಎಂ ನೋಂದಣಿ ಕಾರ್ಯ ಸಮರ್ಪಕವಾಗಿರುವಂತೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಸೂಚನೆ

Update: 2020-01-16 18:20 GMT

ಚಿಕ್ಕಮಗಳೂರು, ಜ.16: ದೇಶದ ಅಸಂಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಸರಕಾರ ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್‍ಧನ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ  ಪಿಂಚಣಿ ನೀಡಲು ಸಮರ್ಪಕವಾಗಿ ಕಾರ್ಮಿಕರ ನೋಂದಣಿ ಕಾರ್ಯವಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕೇಂದ್ರ ಸರಕಾರ ಪಿ.ಎಂ-ಎಸ್.ವೈ.ಎಂ ಪಿಂಚಣಿಯ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇ.ಎಸ್.ಐ/ಪಿ.ಎಫ್/ಎನ್.ಪಿ.ಎಸ್ ಯೋಜನೆಗೆ ಪ್ರಯೋಜನ ಪಡೆಯದ ಅಸಂಟಿತ ವಲಯದ ಕಾರ್ಮಿಕರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿದ್ದಾರೆ. 18-40 ವರ್ಷದೊಳಗಿನ ಕಾರ್ಮಿಕರೆಲ್ಲಾ ಪಿಂಚಣಿಗಾಗಿ ನೋಂದಣಿಯಾಗಬಹುದು. ಅಂಗಡಿ ಮಾಲಕರು, ಚಿಲ್ಲರೆ ವ್ಯಾಪಾರಿಗಳು, ಅಕ್ಕಿ ಗಿರಣಿ ಮಾಲಕರು, ಎಣ್ಣೆ ಗಿರಣಿ ಮಾಲಕರು, ವರ್ಕ್ ಶಾಪ್  ಮಾಲಕರು, ಕಮಿಷನ್ ಏಜೆಂಟ್ಸ್, ರಿಯಲ್ ಎಸ್ಟೇಟ್ ಬ್ರೋಕರ್‍ಗಳು, ಸಣ್ಣ ಹೊಟೇಲ್ ಹಾಗೂ ರೆಸ್ಟೋರೆಂಟ್ ಮಾಲಕರು, ಸಣ್ಣ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ ಎಂದರು.

ಮಾಸಿಕ ಆದಾಯ 15 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಆದಾಯ ಹೊಂದಿರುವ, ಆದಾಯ ತೆರಿಗೆ ಪಾವತಿಸುವವರು ಹಾಗೂ ಇತರ ಯಾವುದೇ ಪಿಂಚಣಿ ಯೋಜನೆಯ ಉಪಯೋಗ ಪಡೆಯುತ್ತಿರುವವರು ನೋಂದಣಿಯಾಗಲು ಸಾಧ್ಯವಿಲ್ಲ. ಅರ್ಹ ಫಲಾನುಭವಿಗಳು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೊತೆಗೆ ತಮ್ಮ ಹತ್ತಿರದ ಕಾಮನ್ ಸರ್ವೀಸ್ ಸೆಂಟರ್‍ಗೆ ತೆರಳಿ ನಿಗದಿ ಪಡಿಸಿದ ಮೊತ್ತವನ್ನು ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು. 

ಎಲ್ಲಾ ಇಲಾಖೆಗಳು ಮತ್ತು ಸಂಘಟನೆಗಳು ಸಮನ್ವಯದಿಂದ ಕೆಲಸ ಮಾಡಿ ಅಸಂಟಿತ ವಲಯದ ಕಾರ್ಮಿಕರಲ್ಲಿ ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಪಿ.ಎಂ-ಎಸ್.ವೈ.ಎಂ ಪಿಂಚಣಿ ಯೋಜನೆಯ ಪ್ರಯೋಜನೆ ಪಡೆಯಲು ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವೊಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ ಅವರು, ಪಿ.ಎಂ-ಎಸ್.ವೈ.ಎಂ ಪಿಂಚಣಿ ಯೋಜನೆಯಡಿ ಜಿಲ್ಲೆಯಲ್ಲಿ  ಕೇವಲ 1800 ಕಾರ್ಮಿಕರು ನೋಂದಣಿಯಾಗಿದ್ದು, ಉಳಿದ ಕಾರ್ಮಿರನ್ನು ಶೀಘ್ರವಾಗಿ ಯೋಜನೆಗೆ ಸೇರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕ ರವಿ, ಕಾರ್ಮಿಕ ಅಧಿಕಾರಿ ಕೃಷ್ಣಮ್ಮ, ಕಾರ್ಮಿಕ ಆಯುಕ್ತ ಜಾನ್ಸನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News