ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಲಾಬಿ ನಡೆಸಿಲ್ಲ: ಎಂ.ಬಿ.ಪಾಟೀಲ್

Update: 2020-01-17 13:04 GMT

ಬೆಂಗಳೂರು, ಜ.17: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾನು ಯಾವುದೇ ರೀತಿಯ ಲಾಬಿ ನಡೆಸಿಲ್ಲ. ನಮ್ಮ ಅಭಿಪ್ರಾಯಗಳನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಿಳಿಸಿದ್ದು, ಇಂದು ಸಂಜೆ ಅಥವಾ ನಾಳೆ ವೇಳೆಗೆ ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಶುಕ್ರವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಾಗಲಿ, ಈಶ್ವರ್ ಖಂಡ್ರೆಯಾಗಲಿ ಹುದ್ದೆಯನ್ನು ಕೊಟ್ಟರೆ ನಿಭಾಯಿಸುತ್ತೇವೆ ಎಂದು ಹೇಳಿದ್ದೇವೆಯೇ ಹೊರತು, ಲಿಂಗಾಯತರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡುವಂತೆ ಬೇಡಿಕೆಯನ್ನು ಇಟ್ಟಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಅಧ್ಯಕ್ಷರೊಬ್ಬರೇ ಎಲ್ಲ ಕಡೆ ಓಡಾಡಿ ಪಕ್ಷ ಸಂಘಟನೆ ಮಾಡಲು ಸಾಧ್ಯವಾಗುವುದಿಲ್ಲ. ಆದುದಿಂದ, ಪಕ್ಷದ ಹಿತದೃಷ್ಟಿಯಿಂದ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಹೈಕಮಾಂಡ್ ತೀರ್ಮಾನ ಕೈಗೊಳ್ಳಬಹುದು. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಅವರು ಹೇಳಿದರು.

ನನ್ನನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಕೇಳಿಕೊಂಡು ಯಾರನ್ನು ಭೇಟಿ ಮಾಡಿಲ್ಲ. ಆದರೆ, ಸೂಕ್ತ ವ್ಯಕ್ತಿಗಳ ಪಟ್ಟಿಯಲ್ಲಿ ನನ್ನ ಹೆಸರನ್ನು ಸೂಚಿಸಲಾಗಿದೆ. ಲಿಂಗಾಯತ ಸಮುದಾಯ ಹಾಗೂ ಉತ್ತರ ಕರ್ನಾಟಕದವರಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಉತ್ತಮ ಅನ್ನುವ ಚರ್ಚೆಯಿಂದಾಗಿ ನನ್ನ ಹೆಸರು ಕೇಳಿ ಬಂದಿದೆ ಎಂದು ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಿಗೆ ಇರುವ ವರ್ಚಸ್ಸು ಕಡಿಮೆ ಮಾಡುವ ಉದ್ದೇಶದಿಂದ ವಿರೋಧ ಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಹುದ್ದೆಯನ್ನು ಪ್ರತ್ಯೇಕಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ರೀತಿ ಹುದ್ದೆಯನ್ನು ಪ್ರತ್ಯೇ ಮಾಡುವುದು ಸರಿಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News