ದೇಶದಲ್ಲೇ ಹುಟ್ಟಿ ಬೆಳೆದ ಯಾವ ಮುಸ್ಲಿಮರಿಗೂ ಸಿಎಎಯಿಂದ ತೊಂದರೆ ಇಲ್ಲ: ಸಂಸದೆ ಶೋಭಾ

Update: 2020-01-17 16:12 GMT

ಚಿಕ್ಕಮಗಳೂರು, ಜ.17: ಮುಸ್ಲಿಂ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ. ಮತಾಂತರಕ್ಕೆ ಒಪ್ಪದಿದ್ದಲ್ಲಿ ಅವರನ್ನು ಕೊಲೆ ಮಾಡಲಾಗುತ್ತಿದೆ. ಇದರಿಂದಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನಗಳಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಅಲ್ಲಿ ದೌರ್ಜನ್ಯಕ್ಕೊಳಗಾಗುತ್ತಿರುವ ಹಿಂದೂಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ರಕ್ಷಣೆ ನೀಡುತ್ತದೆ. ಈ ಕಾಯ್ದೆಯಿಂದ ದೇಶದಲ್ಲೇ ಹುಟ್ಟಿ ಬೆಳೆದವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಚಳವಳಿಗಳ ಹಿಂದೆ ವಿರೋಧ ಪಕ್ಷಗಳ ರಾಜಕಾರಣವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಶುಕ್ರವಾರ ನಗರದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಆಯೋಜಿಸಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜಾನಜಾಗೃತಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರಕಾರ ಸಾಕಷ್ಟ ಬಾರಿ ಚರ್ಚಿಸಿ, ಆಲೋಚಿಸಿ ಈ ದೇಶದಲ್ಲೇ ಹುಟ್ಟಿ ಬೆಳೆದ ಮುಸ್ಲಿಮರಾದಿಯಾಗಿ ಯಾವುದೇ ಹಿಂದು, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿಗಳಿಗೆ ತೊಂದರೆಯಾಗುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ಬಳಿಕಷ್ಟೇ ಕಾಯ್ದೆಯನ್ನು ಜಾರಿ ಮಾಡಿದೆ. ಆದರೆ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಉದ್ದೇಶದಿಂದಾಗಿ ಈ ಕಾಯ್ದೆ ವಿರುದ್ಧ ಜನರಲ್ಲಿ ಗೊಂದಲ ಮೂಡಿಸಿದೆ. ಈ ಕಾರಣದಿಂದಾಗಿ ದೇಶಾದ್ಯಂತ ಕಾಯ್ದೆ ವಿರುದ್ಧ ಆತಂಕಕ್ಕೊಳಗಾಗಿರುವ ಮುಸ್ಲಿಂ ಸಮುದಾಯದವರು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಅಸಲಿಗೆ ಈ ಕಾಯ್ದೆಯಿಂದ ಈ ದೇಶದವರೇ ಆಗಿರುವ ಯಾವುದೇ ಮುಸ್ಲಿಮನರಿಗೂ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

ಹಿಂದೆ ಅಪ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಅಖಂಡ ಭಾರತದ ಭಾಗವಾಗಿತ್ತು. ಹಿಂದೂಗಳು ಆಗ ಎಲ್ಲ ಭಾಗದಲ್ಲೂ ಇದ್ದರು. ಆದರೆ ರಾಜಕಾರಣಕ್ಕಾಗಿ ಕಾಂಗ್ರೆಸ್‍ನವರು ದೇಶವನ್ನು ವಿಭಜನೆ ಮಾಡಿದರು. ಈ ವೇಳೆ ಲಕ್ಷಾಂತರ ಹಿಂದುಗಳ ಮಾರಣ ಹೋಮವಾಯಿತು. ಪ್ರಸಕ್ತ ಈ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದ ಅವರು, ಅಪ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಈ ಹಿಂದೆ ಇದ್ದ ಹಿಂದುಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಜೈನ, ಕ್ರೈಸ್ತ, ಬೌದ್ಧ, ಪಾರ್ಸಿ ಸಮುದಾಯದವರು ಇಂದಿಗೂ ದೌರ್ಜನ್ಯಕ್ಕೊಳಗಾಗುತ್ತಿದ್ದು, ಅವರೆಲ್ಲರೂ ತಮ್ಮ ತಾಯ್ನಾಡಾದ ಭಾರತಕ್ಕೆ ಬರಲು ಹವಣಿಸುತ್ತಿದ್ದಾರೆ. ಇಂತಹವರಿಗೆ ಭಾರತದ ನಾಗರಿಕತ್ವ ನೀಡುವುದು ಮತ್ತು ಅಕ್ರಮವಾಗಿ ದೇಶದೊಳಗೆ ನುಸುಳಿ ಬಂದ ವಿದೇಶಿಯರನ್ನು ಹೊರದಬ್ಬುವುದು ಪೌರತ್ವ ತಿದ್ದುಪಡಿ ಕಾಯ್ದೆಯ ಉದ್ದೇಶವಾಗಿದೆ. ಈ ಕಾಯ್ದೆಯಿಂದ ಭಾರತದಲ್ಲಿ ಹುಟ್ಟಿ ಬೆಳೆದ ಯಾವ ಸಮುದಾಯದವರಿಗೂ ಅನ್ಯಾಯವಾಗಲು ಸಾಧ್ಯವಿಲ್ಲ. ವಿರೋಧಿಗಳು ಕಾಯ್ದೆ ಸಂಬಂಧ ಅಪಪ್ರಚಾರ ಮಾಡುತ್ತಿದ್ದು, ಜಿಲ್ಲೆಯ ಎಲ್ಲ ನಾಗರಿಕರಲ್ಲಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸಲು ಕಾರ್ಯಕರ್ತರು ಮುಂದಾಗಬೇಕೆಂದು ಕರೆ ನೀಡಿದರು.

ರಾಷ್ಟ್ರ ಜಾಗರಣಾ ಸಮಿತಿ ಮುಖಂಡ ಆದರ್ಶ ಗೋಖಲೆ ಮಾತನಾಡಿ, ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಮಂಗಳರನ್ನು ಮತ್ತೊಂದು ಕಾಶ್ಮೀರ ಮಾಡಲು ಹೊರಟಿದ್ದರು. ಆದರೆ ಕಮೀಶನರ್ ಹರ್ಷ ಅವರು ಗೋಲಿಬಾರ್ ಮಾಡುವ ಮೂಲಕ ಸರಿಯಾದ ಕ್ರಮ ಕೈಗೊಂಡಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಸಿಎಎ, ಎನ್‍ಆರ್‍ಸಿ ವಿರೋಧಿಸುವವರು ದೇಶದ್ರೋಹಿಗಳಾಗಿದ್ದಾರೆ.  ಕಾಯ್ದೆ ಸಂಬಂಧ ಸಂಸತ್‍ನಲ್ಲಿ ಕೇಂದ್ರ ಸರಕಾರ ವಿರೋಧ ಪಕ್ಷಗಳನ್ನು ಚರ್ಚೆಗೆ ಆಹ್ವಾನಿದಾಗ ಅಲ್ಲಿ ಚರ್ಚೆ ಮಾಡದೇ ಕಾಯ್ದೆ ಜಾರಿ ಬಳಿಕ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು

ಕೇಂದ್ರದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ದೇಶದ ಎಲ್ಲ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಯುತ್ತಿವೆ, 2014ರಿಂದ 2019ರವರೆಗೆ ದೇಶದಲ್ಲಿ ಒಂದೇ ಒಂದು ಭಯೋತ್ಪಾದಕರ ದಾಳಿ ನಡೆದಿಲ್ಲ. ಕಾಶ್ಮೀರದ ಸಮಸ್ಯೆಗೆ ವಿರಾಮ ಹಾಡಿದ್ದಾರೆ ಎಂದ ಅವರು ಅಯೋದ್ಯೆ ವಿವಾದಕ್ಕೆ ನ್ಯಾಯಾಲಯ ತೆರೆ ಎಳೆದಿದ್ದರು ಮೋದಿ ಸರಕಾರ ಇಂತಹ ತೀರ್ಪಿಗಾಗಿ ಪೂರಕವಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಮೋದಿ ಸರಕಾರದ ಬಿಗಿಯಾದ ಆಡಳಿತದಿಂದ ವಿರೋಧಿಗಳೆಲ್ಲರೂ ಬೀದಿಗೆ ಬಂದಿದ್ದಾರೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಸುಜಾತಾ ಕೃಷ್ಣಪ್ಪ, ಬೆಳವಾಡಿ ರವೀಂದ್ರ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿದ್ದ ಸಿ.ಟಿ.ರವಿ ಗೈರಾಗಿದ್ದರು.

ಜೆಎನ್‍ಯು ಹೆಸರು ಬದಲಿಸಿ ಸಾವರ್ಕರ್ ಹೆಸರಿಡಬೇಕು
ಜೆಎನ್‍ಯು ವಿವಿಯಲ್ಲಿ ದೇಶದ್ರೋಹಿಗಳು ಸೇರಿಕೊಂಡಿದ್ದಾರೆ. ದೇಶಾದ್ಯಂತ ವಿಷ ಬೀಜ ಬಿತ್ತುವ ಕೇಂದ್ರವಾಗಿ ಜೆಎನ್‍ಯು ಬೆಳೆಯುತ್ತಿದೆ. ಈ ವಿವಿ ಕೇಂದ್ರ ಸರಕಾರ ಜಾರಿ ಮಾಡುವ ಎಲ್ಲ ಜನಪರ ಕಾಯ್ದೆ ಕಾನೂನುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ವಿವಿಗಳಿಗೆ ಮೊದಲು ಬೀಗ ಹಾಕಬೇಕು. ಜೆಎನ್‍ಯು ಎಂಬ ಹೆಸರಿನಲ್ಲೇ ದೋಷವಿದ್ದು, ಅದಕ್ಕೆ ವಿ.ಡಿ.ಸಾವರ್ಕರ್ ಯೂನಿವರ್ಸಿಟಿ ಎಂತಲೋ, ನೇತಾಜಿ ಶುಭಾಷ್ ಚಂದ್ರಬೋಸ್ ಯೂನಿರ್ವಸಿಟಿ ಎಂತಲೋ ಹೆಸರಿಡಬೇಕು. ಆಗ ಇಂತಹ ವಿವಿಗಳಲ್ಲಿ ದೇಶಭಕ್ತ ವಿದ್ಯಾರ್ಥಿಗಳು ಹುಟ್ಟಿಕೊಳ್ಳುತ್ತಾರೆ.
- ಆದರ್ಶ ಗೋಖಲೆ, ರಾಷ್ಟ್ರ ಜಾಗರಣಾ ಸಮಿತಿ ಮುಖಂಡ

ನಗರದಲ್ಲಿ ಬಿಜೆಪಿ ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಕ್ಕೆ ಭಾರೀ ಜನ ಸೇರುವುದು ಸಾಮಾನ್ಯ. ಆದರೆ ಶುಕ್ರವಾರ ನಡೆದ ಪೌರತ್ವ ಕಾಯ್ದೆ ಜಾಗೃತಿ ಕಾರ್ಯಕ್ರಮದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಕಂಡು ಬರಲಿಲ್ಲ. ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಕುರ್ಚಿಗಳು ಕೆಲವೆಡೆ ಖಾಲಿ ಬಿದ್ದಿದ್ದವು. ಇನ್ನು ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಕರೆ ತರುವ ಪ್ರಯತ್ನ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ಡಿಡಿಪಿಯು ಅವಕಾಶ ನೀಡಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News