ಪೊಲೀಸ್ ಆಯುಕ್ತ ಹರ್ಷ ಅಮಾನತು ಆಗುವವರೆಗೂ ಕಲಾಪ ನಡೆಯಲು ಬಿಡಲ್ಲ: ಕುಮಾರಸ್ವಾಮಿ

Update: 2020-01-17 16:21 GMT

ಬೆಂಗಳೂರು, ಜ.17: ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ವೇಳೆ ನಡೆದ ಪೊಲೀಸ್ ಗೋಲಿಬಾರ್ ಪ್ರಕರಣ ಸಂಬಂಧ ಪೊಲೀಸ್ ಆಯುಕ್ತ ಹರ್ಷ ಸೇರಿದಂತೆ ತಪ್ಪಿತಸ್ಥ ಪೊಲೀಸರು ಅಮಾನತು ಆಗುವರೆಗೂ ವಿಧಾನಸಭಾ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಶುಕ್ರವಾರ ನಗರದ ಮಿಲ್ಲರ್ ರಸ್ತೆಯ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದ ಮಸೀದಿ ಸಭಾಂಗಣದಲ್ಲಿ ಕರ್ನಾಟಕ ಜಯಂಟ್ ಆಕ್ಷನ್ ಕಮಿಟಿ ಆಯೋಜಿಸಿದ್ದ, ಸಿಎಎ, ಎನ್ಆರ್ ಸಿ, ಹಾಗೂ ಎನ್ ಪಿಆರ್ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ಅಮಾಯಕರಿಬ್ಬರ ಮೇಲೆ ಗುಂಡು ಹಾರಿಸಿದ ಪೊಲೀಸ್ ಸಿಬ್ಬಂದಿ ಸೇರಿದಂತೆ, ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಈ ಸಂಬಂಧ ಹೋರಾಟ ವಿಧಾನಸೌಧದ ಒಳಗೂ ನಡೆಯಲಿದೆ ಎಂದು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ರಾಜ್ಯದ ಮೂವತ್ತು ಜಿಲ್ಲೆಗಳಲ್ಲೂ ಭಾರೀ ಪ್ರತಿಭಟನೆ ನಡೆದಿದೆ. ಆದರೆ, ಮಂಗಳೂರಿನಲ್ಲಿ ಮಾತ್ರ ಏಕೆ ಗೋಲಿಬಾರ್ ಆಗಿದೆ ಎಂದು ಪ್ರಶ್ನಿಸಿದ ಅವರು, ಮುಸ್ಲಿಮರನ್ನು ಭಯಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಇದರ ವಿರುದ್ಧ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಖಂಡನೀಯ: ದೇಶದಲ್ಲಿ ಬಿಜೆಪಿ ಸರ್ಕಾರ ಎರಡನೇ ಬಾರಿಗೆ ಬಂದ ನಂತರ, ಆರ್ಥಿಕತೆ ಕುಸಿತ ಸೇರಿದಂತೆ ನಾವು ಹಲವು ಎದುರಿಸುತ್ತಿದ್ದೇವೆ.ಅದನ್ನು ಮರೆಮಾಚುವ ಉದ್ದೇಶದಿಂದ ಜಮ್ಮು ಕಾಶ್ಮೀರದ 370ನೇ ವಿಧಿ ಬದಲಾವಣೆ ಮಾಡಿದರು. ಇದರ ಪರಿಣಾಮ ಕೋಟ್ಯಂತರ ರೂಪಾಯಿ‌ ನಷ್ಟ ಆಗಿದೆ. ಅಷ್ಟೇ ಅಲ್ಲದೆ, ಅಲ್ಲಿನ ನಾಯಕರನ್ನು ಬಂಧಿಸಿರುವುದು ಖಂಡನೀಯ ಎಂದರು.

ಮುಸ್ಲಿಮರ ಶಕ್ತಿ ಕುಗ್ಗಿಸುವ ಗುರಿಯನ್ನಿಟ್ಟುಕೊಂಡು ಸಿಎಎ, ಎನ್ಆರ್ಸಿ ಜಾರಿಗೆ ತಂದಿದ್ದಾರೆ. ಆದರೆ, ಇದರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ ಶುರು ಆಗಿದ್ದು, ಕೇಂದ್ರ ಸರ್ಕಾರವೇ ಭಯಗೊಂಡಿದೆ. ಇನ್ನು, ಈ ಹೋರಾಟದಲ್ಲಿ ಜನ ಸಾಮಾನ್ಯರು ಭಾಗಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಖ್, ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ, ನಿವೃತ್ತ ಐಎಎಸ್ ಅಧಿಕಾರಿ ಝಮೀರ್ ಪಾಷಾ ಸೇರಿದಂತೆ ಪ್ರಮುಖರಿದ್ದರು.

ಗೋಡ್ಸೆಗೆ ಭಾರತ ರತ್ನ ನೀಡಿ
ಹಿಂದುತ್ವ ಹೆಸರಿನಲ್ಲಿ ಇಂದು ಸಮಾಜ ಒಡೆಯುವ ಕೆಲಸ‌ ನಡೆಯುತ್ತಿದೆ. ಅಲ್ಲದೆ, ದೇಶಕ್ಕೆ ಸಂಘ ಪರಿವಾರದ ಕೊಡುಗೆಯಾದರು ಏನು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸಾರ್ವಕರ್ ಗೆ ಭಾರತ ರತ್ನ ನೀಡಬೇಕು ಎಂದು ಬಿಜೆಪಿಯವರು ಹೇಳುತ್ತಾರೆ. ಇದಕ್ಕೂ ಮೊದಲು ನಾಥೂರಾಮ್ ಗೋಡ್ಸೆಗೆ ನೀಡಲಿ ನೋಡೋಣ ಎಂದರು.

ಸಿದ್ದರಾಮಯ್ಯ ಜತೆ ಭಾಗಿ
ಸಿಎಎ, ಎನ್ ಆರ್ ಸಿ ವಿರುದ್ಧ ನಡೆಯುವ ಹೋರಾಟಕ್ಕೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಲಿದ್ದು, ಕಾಂಗ್ರೆಸ್, ಸಿದ್ದರಾಮಯ್ಯ, ಯಾರೇ ಆಗಲಿ ಅವರೊಂದಿಗೆ ಭಾಗಿ ಆಗುತ್ತೇನೆ

- ಕುಮಾರಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News