ವಿಧಾನಸಭೆ ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ: ಸ್ಪೀಕರ್‌ಗೆ ಮನವಿ ಸಲ್ಲಿಸಲು ಹೈಕೋರ್ಟ್ ಆದೇಶ

Update: 2020-01-17 17:11 GMT

ಬೆಂಗಳೂರು, ಜ.17: ವಿಧಾನಸಭೆ ಕಲಾಪ ವರದಿ ಮಾಡಲು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅರ್ಜಿದಾರರಿಗೆ ವಿಧಾನಸಭೆ ಸ್ಪೀಕರ್ ಅವರಿಗೆ ಮನವಿ ಪತ್ರ ಸಲ್ಲಿಸಲು ನಿರ್ದೇಶಿಸಿ, ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

ಈ ಕುರಿತು ವಕೀಲ ಎಲ್.ರಮೇಶ್ ನಾಯ್ಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರ ರಮೇಶ್ ನಾಯ್ಕಾ ಅವರು ವಾದಿಸಿ, ವಿಧಾನಸಭೆ ಕಲಾಪಗಳಿಂದ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವುದರಿಂದ ಮತದಾರರ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ನಾವು ಮತ ನೀಡಿ ಕಳುಹಿಸಿರುವ ಜನಪ್ರತಿನಿಧಿಗಳು ಕಲಾಪದಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಗೋತ್ತಾಗಬೇಕಾದರೆ, ಮಾಧ್ಯಮಗಳ ನಿರ್ಬಂಧದ ಆದೇಶವನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಹಿಂದೆ ಸದನದಲ್ಲಿ ಮೂವರು ಸಚಿವರು ನೀಲಿ ಚಿತ್ರ ವೀಕ್ಷಿಸಿ ಸಿಕ್ಕಿಕೊಂಡಿದ್ದೂ ಮಾಧ್ಯಮಗಳಿಂದಲೇ, ಶಾಸಕರೊಬ್ಬರು ಬಟ್ಟೆ ಹರಿದುಕೊಂಡು ಟೇಬಲ್ ಮೇಲೆ ಹತ್ತಿ ಕೂಗಾಡಿದ್ದು ರಾಜ್ಯಾದ್ಯಂತ ಪ್ರಚಾರವಾಗಲೂ ಮಾಧ್ಯಮಗಳೆ ಕಾರಣ. ಹೀಗಾಗಿ, ಮಾಧ್ಯಮಗಳನ್ನು ನಿರ್ಬಂಧಿಸದಂತೆ ನಿರ್ದೇಶನ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಧಾನಸಭೆ ಸ್ಪೀಕರ್ ಅವರಿಗೆ ಮನವಿ ಪತ್ರ ಸಲ್ಲಿಸಲು ನಿರ್ದೇಶಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

ಕಲಾಪದಲ್ಲಿ ನೀಲಿ ಚಿತ್ರ ವೀಕ್ಷಣೆ ‘ಈ ಹಿಂದೆ ಸದನದಲ್ಲಿ ಸಚಿವರು ನೀಲಿ ಚಿತ್ರ ವೀಕ್ಷಿಸಿದ್ದನ್ನು ಮಾಧ್ಯಮಗಳು ಸೆರೆ ಹಿಡಿದು ರಾಜ್ಯದ ಜನರಿಗೆ ತೋರಿಸಿದ್ದವು. ಈಗ ಸ್ಪೀಕರ್ ಅವರು ವಿಧಾನಸಭೆ ಕಲಾಪಗಳಿಗೆ ಮಾಧ್ಯಮಗಳನ್ನು ನಿರ್ಬಂಧಿಸಿದರೆ, ಮತದಾರರ ಹಕ್ಕು ಮೊಟಕುಗೊಳಿಸಿದಂತಾಗುತ್ತದೆ.

-ಎಲ್.ರಮೇಶ್ ನಾಯ್ಕಾ, ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News