ಸಾಗರಮಾಲಾ ಯೋಜನೆ: ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಮಾಜಿ ಶಾಸಕ ಸೈಲ್ ವಾಗ್ದಾಳಿ

Update: 2020-01-17 17:34 GMT

ಕಾರವಾರ: ಸಾಗರಮಾಲಾ ಯೋಜನೆ ಕೇಂದ್ರದ ಸರಕಾರ ಯೋಜನೆಯಾಗಿದೆ. ಇಂಥ ಯೋಜನೆಗಳನ್ನು ಕೇಂದ್ರ ಜಾರಿಗೆ ತರುವಾಗ ಸ್ಥಳೀಯ ಶಾಸಕರನ್ನು ಕೇಳುವುದಿಲ್ಲ ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೇಳಿದರು.

ಅವರು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ನಾಯಕರು ಸಾಗರಮಾಲಾ ಯೋಜನೆ ನಾನೇ ತಂದಿದ್ದೇವೆ ಎನ್ನುವ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸಿ ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಪ್ರತ್ಯುತ್ತರ ನೀಡಿದರು. 

ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ, ಬಂದರು ಸಚಿವರ ಬಳಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಮೀನುಗಾರರಲ್ಲಿ ತನ್ನ ವಿರುದ್ಧ ಪ್ರಚೋದಿಸುತ್ತಿದ್ದಾರೆ. ಕೇಂದ್ರ ಸರಕಾರದ ಬಂದರು, ಹೆದ್ದಾರಿ, ನದಿ ಜೋಡಣೆಯಂಥ ಯೋಜನೆಗಳಲ್ಲಿ ಸ್ಥಳೀಯ ಶಾಸಕರಿಗೆ ಮಾಹಿತಿಯೂ ನೀಡುವುದಿಲ್ಲ. ಇದರಲ್ಲಿ ತನ್ನ ಪಾತ್ರ ಏನು ಇಲ್ಲ ಎಂದು ಸ್ಪಷ್ಟಪಡಿಸಿರು. 

ಕಳೆದ ಕೆಲವು ವರ್ಷಗಳ ಹಿಂದೆಯೇ ಬಂದರು ವಿಸ್ತರಣೆ ಬಗ್ಗೆ ಯೋಜನೆ ರೂಪಿಸಲಾಗಿದೆ. ಹಂತ ಹಂತವಾಗಿ ಯೋಜನೆ ಈಗ ಕಾರ್ಯರೂಪಕ್ಕೆ ತರಲಾಗಿದೆ. ಕಳೆದ 2018ರ ಫೆ.18ರ ಸಂದರ್ಭದಲ್ಲಿ ಬಂದರು ವಿಸ್ತರಣೆಯಾಗುವ ವಿಷಯ ಇಲ್ಲಿನ ಮೀನುಗಾರ ಮುಖಂಡರ ಗಮನಕ್ಕೆ ತಂದು ಕಾರವಾರದಲ್ಲಿ ಬೃಹತ್ ಪ್ರಮಾಣದಲ್ಲಿ ಹೋರಾಟ ನಡೆಸಿದ್ದೇನೆ. ಮೀನುಗಾರರ ಜೊತೆ ಸೇರಿ ಧರಣಿ ನಡೆಸಿದ್ದೇನೆ. ಯೋಜನೆಗೆ ತಾನು ಸಹ ವಿರೋಧ ಮಾಡಿಕೊಂಡು ಬಂದಿದ್ದೇನೆ ಎಂದರು. 

ಕಾರವಾರ ಬಂದರು ವಿಸ್ತರಣೆಗೆ ಸಂಬಂಧಿಸಿದಂತೆ ನಡೆದ ಅಹವಾಲು ಸಭೆಯಲ್ಲಿಯೂ ವಿರೋಧ ಮಾಡಿದ್ದು ಬಂದರಿಗೆ ನೀಡಲಾಗಿದ್ದ ಜಮೀನನ್ನು ವಾಪಸ್ ಪಡೆಯುಂತೆ ಒತ್ತಾಯಿಸಿದ್ದು, ಸುಮಾರು ಮೂರು ಸಾವಿರ ಜನರನ್ನು ಸೇರಿಸಿ ಪ್ರತಿಭಟಿಸಿದ್ದೇನೆ. ಸುಮ್ಮನೆ ನನ್ನ ಮೇಲೆ ಈಗ ಗೂಬೆ ಕೂರಿಸಲು ಇಲ್ಲಿನ ಶಾಸಕಿ ಪ್ರಯತ್ನ ಮಾಡುತ್ತಿದ್ದಾರೆ. ಪ್ರಾರಂಭದಲ್ಲೇ ರೂಪಾಲಿ ನಾಯ್ಕ ರಾಜ್ಯ ಮಹಿಳಾ ಮೋರ್ಚಾದಲ್ಲಿ ಸ್ಥಾನ ಪಡೆದಿದ್ದವರು. ಮಹಿಳೆಯರ ಸಮಸ್ಯೆಗಳನ್ನು ಅರಿತು ಯೋಜನೆಗೆ ಪ್ರಾರಂಭದಲ್ಲೇ ವಿರೋಧ ಮಾಡಿಲ್ಲ. ಈಗ ಮೀನುಗಾರರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರಿಂದ ಯೋಜನೆಯ ರೂವಾರಿ ಸತೀಶ ಸೈಲ್ ಎನ್ನುವ ನಿಟ್ಟಿನಲ್ಲಿ ಷಡ್ಯಂತ್ರ ರೂಪಿಸಲಾಗುತ್ತಿದೆ. ಆರಂಭದಲ್ಲಿ ಮೀನುಗಾರರ ಗುಡಿಸಲು ತೆರವು ಸಂದರ್ಭದಲ್ಲೂ ಮೀನುಗಾರರಿಗೆ ತಾನು ಬೆಂಬಲ ನೀಡಿದ್ದು ಅವರಿಗೆ ಒಣ ಮೀನು ಇಡುವಂಥ ವ್ಯವಸ್ಥೆಯನ್ನು ಕಲ್ಪಿಸಿದ್ದೆ. ಆದರೆ ಆಗಲೂ ಆರ್. ವಿ. ದೇಶಪಾಂಡೆ ಹಾಗೂ ನನ್ನ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದರು. ಆ ಸಂದರ್ಭದಲ್ಲಿ ನಾನು ಶಾಸಕನಾಗಿದ್ದು ಅವರಿವರ ಮೇಲೆ ಆರೋಪ ಮಾಡುವ ಕೆಲಸ ಮಾಡಿಲ್ಲ. ಅದರ ಬದಲು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದು ಮೀನುಗಾರರಿಗೆ ತಿಳಿಸಿದೆ ಎಂದರು. 

ಆನಂದ ಅಸ್ನೋಟಿಕರ್ ಸಿದ್ದರಾಮಯ್ಯ ಅವರನ್ನು ಕರೆಸಿ ಎಂದು ಹೇಳುತ್ತಿದ್ದಾರೆ. ಅವರಿಗೆ ಸಂಬಂಧಿಸಿ ಬಂದರು ಕಾರ್ಯದರ್ಶಿ ಬಲವಂತ ನಾಯ್ಕ ಇಲ್ಲಿನ ಬಂದರು ವಿಸ್ತರಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಅವರು ಬೇಕಾಬಿಟ್ಟಿ ಮಾತನಾಡುವುದನ್ನು ಮೊದಲು ಬಿಡಬೇಕು ಎಂದರು. ಅಲ್ಲದೆ ಜಿಲ್ಲೆಯಲ್ಲಿ ಪತ್ರಿಕಾ ಹೇಳಿಕೆ ಹಾಗೂ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಅನೇಕರು ಸಾಗರಮಾಲಾ ಯೋಜನೆ ಸೈಲ್ ತಂದಿದ್ದರಿಂದ ಮೀನುಗಾರರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಟೀಕಿಸುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು. 

ಬಂದರು ವಿಸ್ತರಣೆಗೆ ಸಂಬಂಧಿಸಿಂತೆ ಅಲೆ ತಡೆಗೋಡೆ ನಿರ್ಮಿಸುವುದರಿಂದ ಅದರ ದುಷ್ಪರಿಣಾಮ ಸುಮಾರು 8 ಕಿ.ಮೀಟರ್ ವ್ಯಾಪ್ತಿಯಲ್ಲಿ ಭಾರೀ ಅಲೆಗಳು ಸೃಷ್ಟಿಯಾಗುತ್ತದೆ. ಈಗಾಗಲೇ ಮಳೆಗಾಲದಲ್ಲಿ ದೇವಭಾಗ, ಮಾಜಾಳಿವರೆಗೂ ಆಗುತ್ತಿದೆ. ಈಗ ಅದರ ಪರಿಣಾಮ ಇನ್ನಷ್ಟು ಹೆಚ್ಚಲಿದೆ. ಅಲೆಯ ರಭಸಕ್ಕೆ ಸಮುದ್ರ ಕೊರೆತ ಉಂಟಾಗುವುದರಿಂದ ಸರಕಾರ ಇನ್ನಷ್ಟು ತಡೆಗೋಡೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಿದ್ದು ಇದರಿಂದ ಸಾರ್ವಜನಿಕರಿಗೆ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಗೂ ತೊಂದರೆಯಾಗಲಿದೆ. ಸಾಗರಮಾಲಾ ಹೋರಾಟದ ವಿರುದ್ಧ ಸದಾ ನಾನು ಮೀನುಗಾರರ ಜೊತೆಗಿದ್ದೇನೆ ಎಂದರು. 

ಸಾಗರಮಾಲಾ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಶಾಸಕ ಸತೀಶ ಸೈಲ್ ಕಲ್ಲು ಪೂರೈಕೆ ಮಾಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಸತ್ಯಕ್ಕೆ ದೂರವಾಗಿದ್ದು ರಾಷ್ಟ್ರೀಯ ಹೆದ್ದಾರಿ ವಿಷಯಕ್ಕೆ ಸಂಬಂಧಿಸಿದಂತೆ ಕ್ಲಿಯರನ್ಸ್ ಅಗತ್ಯವಿದ್ದರಿಂದ ಕಲ್ಲು ಸರಬರಾಜು ಜಿಲ್ಲಾಧಿಕಾರಿ ಕಲ್ಲು ಪೂರೈಸಲು ಸೂಚಿಸಿದ್ದಾರೆ ಎಂದು ಸತೀಶ ಸೈಲ್ ಆರೋಪಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಕೆ. ಶಂಭು ಶೆಟ್ಟಿ, ಜಿಪಂ ಸದಸ್ಯ ಕೃಷ್ಣಾ ಮೇತಾ, ತಾಪಂ ಸದಸ್ಯ ಮಾರುತಿ ನಾಯ್ಕ, ಪ್ರಭಾರ ಮಾಳ್ಸೇಕರ್, ಫ್ಯಾಂಕಿ ಫರ್ನಾಂಡಿಸ್, ದಿಲೀಪ್ ನಾಯ್ಕ, ರವೀಂದ್ರ ಅಮದಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಹಾಗೂ ಇನ್ನಿತರು ಇದ್ದರು. 

ಸಾಗರಮಾಲಾ ಯೋಜನೆ ಕಾರವಾರಕ್ಕೆ ಬೇಕು ಎಂದು ನಾನು ಪತ್ರ ಬರೆದಿದ್ದೇನೆ ಎಂದು ಆರೋಸಿಸಲಾಗಿದೆ. ಒಂದು ವೇಳೆ ಈ ಬಗ್ಗೆ ನಾನು ಪತ್ರ ಬರೆದಿರುವ ದಾಖಲೆ ನೀಡಿದರೆ ನಾನು ಕಾರವಾರ ಬಿಟ್ಟು ಹೋಗುತ್ತೇನೆ.
-ಸತೀಶ್ ಸೈಲ್, ಮಾಜಿ ಶಾಸಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News