ಸಮಾಜವಾದಿ ಪಕ್ಷ ಸೇರಿದ ಆದಿತ್ಯನಾಥ್ ರ ಮಾಜಿ ಬಲಗೈ ಬಂಟ

Update: 2020-01-18 14:00 GMT

ಲಕ್ನೋ: ಒಂದೊಮ್ಮೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ತಮ್ಮ ನಡುವಿನ ಸಂಬಂಧವನ್ನು ರಾಮ ಮತ್ತು ಹನುಮಾನ್ ನಡುವಿನ ಸಂಬಂಧಕ್ಕೆ ಹೋಲಿಸಿದ್ದ ಹಿಂದು ಮುಖ್ಯವಾಹಿನಿಯ ಮಾಜಿ ಮುಖ್ಯಸ್ಥ ಸುನೀಲ್ ಸಿಂಗ್ ಇಂದು ಸಮಾಜವಾದಿ ಪಕ್ಷವನ್ನು ಆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಸೇರಿದರು.

ರಾಜ್ಯದ ವಿದ್ಯಾರ್ಥಿಗಳು, ರೈತರು ಹಾಗೂ ಮಹಿಳೆಯರನ್ನು ವಂಚಿಸಿದ್ದಕ್ಕಾಗಿ ಬಿಜೆಪಿಯನ್ನು `ನಾಶ'ಗೈಯ್ಯುವುದಾಗಿ ಅವರು ಈ ಸಂದರ್ಭ ಶಪಥಗೈದರು.

ಒಂದು ಕಾಲದಲ್ಲಿ ಆದಿತ್ಯನಾಥ್ ಅವರ ಬಲಗೈ ಬಂಟನೆಂದೇ ಕರೆಯಲ್ಪಡುತ್ತಿದ್ದ ಸುನೀಲ್ ಸಿಂಗ್ ಒಂದು ವಾರದ ಹಿಂದೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಅವರನ್ನು ಭೇಟಿಯಾಗಿದ್ದರಲ್ಲದೆ, ತಮ್ಮ ಬೆಂಬಲಿಗರೊಂದಿಗೆ ಅವರ ಪಕ್ಷ ಸೇರಲು ನಿರ್ಧರಿಸಿದ್ದರು. ಕಳೆದ ವಿಧಾನಸಭಾ ಚುನಾವಣೆ 2017ರಲ್ಲಿ ನಡೆಯುವುದಕ್ಕಿಂತ ಮುನ್ನ ಆದಿತ್ಯನಾಥ್ ಜತೆಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಅವರನ್ನು ಹಿಂದು ಯುವ ವಾಹಿನಿಯಿಂದ ಉಚ್ಛಾಟಿಸಲಾಗಿತ್ತು.

ನಂತರ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಜೈಲಿಗಟ್ಟಲಾಗಿತ್ತು. ಈ ಸಂದರ್ಭ ಅವರು ತಮ್ಮನ್ನು ಹಿಂದು ಯುವವಾಹಿನಿಯ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಘೋಷಿಸಿಕೊಂಡಿದ್ದರು. ನಂತರ ಅವರು ತಮ್ಮದೇ ಆದ ಹಿಂದು ಯುವ ವಾಹಿನಿ (ಭಾರತ್) ಆರಂಭಿಸಿದ್ದರು.

ಕಳೆದ ವರ್ಷ ಜೈಲಿನಿಂದ ಬಿಡುಗಡೆಯಾದ ಅವರು ಲೋಕಸಭಾ ಚುನಾವಣೆ ಸ್ಪರ್ಧಿಸಲು ಇಚ್ಛಿಸಿದ್ದರೂ ಅವರ ನಾಮಪತ್ರ ರದ್ದುಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News