ಪೌರತ್ವ ಕಾಯ್ದೆ-ಎನ್‌ಪಿಆರ್ ವಿರೋಧಿಸಿ 40ಕ್ಕೂ ಹೆಚ್ಚು ಕಡೆ ಅನಿರ್ಧಿಷ್ಟಾವಧಿ ಧರಣಿ ಮುಷ್ಕರ

Update: 2020-01-18 18:37 GMT

ಹೊಸದಿಲ್ಲಿ, ಜ.18: ಶಾಹೀನ್‌ಬಾಗ್ ಮತ್ತು ಜಾಮಿಯ ಮಿಲ್ಲಿಯ ವಿವಿಯಿಂದ ಸ್ಫೂರ್ತಿ ಪಡೆದು ಪೌರತ್ವ ವಿರೋಧಿ ಕಾಯ್ದೆ, ಎನ್‌ಪಿಆರ್ ಮತ್ತು ಎನ್‌ಸಿಆರ್ ವಿರುದ್ಧ ದೇಶದಾದ್ಯಂತದ 40ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಅನಿರ್ಧಿಷ್ಟಾವಧಿ ಧರಣಿ ಮುಷ್ಕರ ಮುಂದುವರಿದಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹವಾಗಿದೆ ಎಂದು ಮೂಲಗಳು ತಿಳಿಸಿವೆ. ಮುಸ್ಲಿಮರ ವಿರುದ್ಧ ತಾರತಮ್ಯ ತೋರುವ ಈ ಕಾನೂನನ್ನು ವಿರೋಧಿಸಿ ಉತ್ತರಪ್ರದೇಶ, ದಿಲ್ಲಿ ಮತ್ತು ಕರ್ನಾಟಕದಲ್ಲಿ ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಬಲಪ್ರಯೋಗ ನಡೆಸಿರುವುದನ್ನು ಖಂಡಿಸಿ ಧರಣಿ ಮುಷ್ಕರ ಆರಂಭವಾಗಿದೆ.

ಧರಣಿ ಮುಷ್ಕರವನ್ನು ಯಾವುದೇ ಸಂಘಟನೆಗಳ ಬೆಂಬಲಕ್ಕೆ ಕಾಯದೆ ಅನೌಪಚಾರಿಕವಾಗಿ ಸ್ಥಳೀಯರೇ ಆರಂಭಿಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಎನ್‌ಪಿಆರ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಹೇಳಿದ್ದಾರೆ. ಅಲಹಾಬಾದ್, ಪಾಟ್ನಾ, ದಿಲ್ಲಿ, ಭೋಪಾಲ ಮತ್ತು ಕೋಲ್ಕತಾದಂತಹ ದೊಡ್ಡ ನಗರಗಳಲ್ಲಿ ನಡೆಯುತ್ತಿರುವ ಧರಣಿ ಮುಷ್ಕರ ಮಾಧ್ಯಮದವರ ಕಣ್ಣಿಗೆ ಬಿದ್ದಿದೆ. ಆದರೆ ಹಲವು ಸಣ್ಣ ನಗರಗಳಲ್ಲಿ ನಡೆಯುತ್ತಿರುವ ಮುಷ್ಕರ ಸುದ್ಧಿಯೇ ಆಗಿಲ್ಲ ಎಂದವರು ಹೇಳಿದ್ದಾರೆ.

ಅಲಹಾಬಾದ್‌ನ ಮನ್ಸೂರ್ ಅಲಿ ಪಾರ್ಕ್‌ನಲ್ಲಿ ಧರಣಿ ನಡೆಸಿದ್ದ 200ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಿಲ್ಲಿಯ ಖುರೇಜಿ ಎಂಬಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಮಧ್ಯರಾತ್ರಿಯ ಬಳಿಕ ಆಗಮಿಸಿದ ಪೊಲೀಸರು ಅಲ್ಲಿಂದ ತೆರಳುವಂತೆ ಮಾಡಿಕೊಂಡ ಮನವಿಗೆ ಮಹಿಳೆಯರು ಸ್ಪಂದಿಸಿಲ್ಲ. ದಿಲ್ಲಿಯ ತುರ್ಕ್‌ಮನ್ ಗೇಟ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದು ನಂತರ ಅವರು ಅದೇ ಸ್ಥಳದಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಹಲವೆಡೆ ಮಹಿಳೆಯರೇ ಮುಂದಾಳತ್ವ ವಹಿಸಿದ್ದಾರೆ. 2002ರ ಗಲಭೆ ಸಂದರ್ಭ ತನ್ನ ಮನೆಗೆ ಬಿದ್ದ ಬೆಂಕಿಯಲ್ಲಿ ತನ್ನಲ್ಲಿದ್ದ ಎಲ್ಲಾ ದಾಖಲೆಪತ್ರಗಳೂ ಸುಟ್ಟುಹೋಗಿದೆ.

ಈಗ ದಾಖಲೆಪತ್ರಗಳನ್ನು ಎಲ್ಲಿಂದ ತರಲಿ? 7ನೇ ತರಗತಿವರೆಗೆ ಶಾಲೆಗೆ ಹೋಗಿದ್ದು ಹೆತ್ತವರು ಮೃತರಾಗಿದ್ದಾರೆ. ಈಗ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತು ಚೀಟಿ ಬಿಟ್ಟರೆ ತನ್ನ ಬಳಿ ಬೇರೇನೂ ಇಲ್ಲ. ಜನನ ಪ್ರಮಾಣ ಪತ್ರ ಅಥವಾ ಶಾಲೆಯವರು ನೀಡಿದ ಪ್ರಮಾಣ ಪತ್ರವಿಲ್ಲ. ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಪ್ರಕ್ರಿಯೆ ಸಂದರ್ಭ ಪೌರತ್ವ ಸಾಬೀತುಪಡಿಸುವುದು ಹೇಗೆ ಎಂದು ಅಹ್ಮದಾಬಾದ್‌ನ 53 ವರ್ಷದ ರುಕ್ಸಾನಾ ಶೇಖ್ ಎಂಬವರು ಪ್ರಶ್ನಿಸಿದ್ದಾರೆ.

ಸೀಲಾಂಪುರ, ಜಫ್ರಾಬಾದ್, ದಿಲ್ಲಿ, ಕೋಲ್ಕತಾದ ಪಾರ್ಕ್ ಸರ್ಕಸ್, ಖಾಜಿ ನಝ್ರುಲ್ ಬಾಗ್, ಅಸಾನ್ಸೋಲ್, ಮಾಣಿಕ್‌ಬಾಗ್, ಇಂದೋರ್, ಭೋಪಾಲದ ಇಕ್ಬಾಲ್ ಮೈದಾನ, ಅಲಹಾಬಾದ್‌ನ ಮನ್ಸೂರ್ ಆಲಿ ಪಾರ್ಕ್, ಕಾನ್ಪುರದ ಮುಹಮ್ಮದ್ ಆಲಿ ಪಾರ್ಕ್, ಬರೇಲಿಯ ಇಸ್ಲಾಮಿಯಾ ಕಾಲೇಜು, ಉ.ಪ್ರದೇಶದ ದಿಯೋಬಂದ್‌ನಲ್ಲಿರುವ ಈದ್ಗಾ ಮೈದಾನ, ರಖಿಯಾಲ್, ಅಹ್ಮದಾಬಾದ್, ಶಾಂತಿ ಬಾಗ್, ಗಯ ಮತ್ತು ಅರಾರಿಯ, ಪಾಟ್ನದ ಸಬ್ಜಿಬಾಗ್, ಔರಂಗಾಬಾದ್, ಪುಣೆ, ನಾಂದೇಡ್, ಖಾಂಡ್ವ, ಘೊಂಡ, ದಿಲ್ಲಿ, ರಾಜಸ್ತಾನದ ಕೋಟ, ಕೇರಳದ ಕೊಚ್ಚಿ ಮುಂತಾದೆಡೆ ಧರಣಿ ಪ್ರತಿಭಟನೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News