​ಸಹೋದ್ಯೋಗಿಯ ಪುತ್ರಿಗೆ ಲೈಂಗಿಕ ದೌರ್ಜನ್ಯ: ಸಿಐಎಸ್‌ಎಫ್ ಪೇದೆ ಬಂಧನ

Update: 2020-01-19 04:06 GMT

ಭುವನೇಶ್ವರ: ಸಹೋದ್ಯೋಗಿಯ ನಾಲ್ಕೂವರೆ ವರ್ಷದ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ 48 ವರ್ಷ ವಯಸ್ಸಿನ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಪೇದೆಯೊಬ್ಬನನ್ನು ಬಂಧಿಸಲಾಗಿದೆ.

ಒಡಿಶಾದ ಬಂದರು ನಗರವಾದ ಪರದೀಪ್‌ನಲ್ಲಿ ಈ ಘಟನೆ ನಡೆದಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ತೈಲ ಶುದ್ಧೀಕರಣ ಘಟಕದಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಕಂದಸ್ವಾಮಿ (48) ಎಂಬಾತ ತನ್ನ ಗುಪ್ತಾಂಗವನ್ನು ಬಾಲಕಿಗೆ ತೋರಿಸುತ್ತಿದ್ದ ಎಂದು ಜಗತ್‌ಸಿಂಗ್‌ಪುರ ಜಿಲ್ಲಾ ಪೊಲೀಸರು ಹೇಳಿದ್ದಾರೆ.

"ಬಾಲಕಿಯನ್ನು ಚಾಕಲೇಟ್ ಆಸೆ ತೋರಿಸಿ ಮನೆಗೆ ಕರೆಯುತ್ತಿದ್ದ ಈತ ಬಟ್ಟೆ ಕಳಚುತ್ತಿದ್ದ. ಈ ವೇಳೆ ಬಾಲಕಿಯ ಬಟ್ಟೆಯನ್ನೂ ಕಳಚುತ್ತಿದ್ದ. ಎರಡು ದಿನಗಳ ಹಿಂದೆ ಚಾಕಲೇಟ್ ಕೊಡುವ ನೆಪದಲ್ಲಿ ಬಾಲಕಿಯನ್ನು ಆರೋಪಿ ಮನೆಗೆ ಕರೆದಾಗ ತಾಯಿಗೆ ಸಂದೇಹ ಬಂದಿದೆ. ಬಾಲಕಿ ಮನೆಗೆ ವಾಪಸ್ಸಾದಾಗ ತಾಯಿ ಕಂದಸ್ವಾಮಿಯ ನಡತೆ ಬಗ್ಗೆ ಪ್ರಶ್ನಿಸಿದರು. ಈ ವೇಳೆ ಬಾಲಕಿ ಆತನ ಕೃತ್ಯದ ಬಗ್ಗೆ ವಿವರಿಸಿದಳು" ಎಂದು ಅಭಯ ಚಂದ್ರಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜುಗಲ್‌ದಾಸ್ ವಿವರಿಸಿದ್ದಾರೆ.

ಸಂತ್ರಸ್ತೆ ಬಾಲಕಿಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಭಾರತೀಯ ದಂಡಸಂಹಿತೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News