ಎಸ್‍ಡಿಪಿಐ ಹಾಗೂ ಪಿಎಫ್‍ಐ ಭಯೋತ್ಪಾದಕ ಸಂಘಟನೆಗಳು: ಕೆ.ಎಸ್.ಈಶ್ವರಪ್ಪ

Update: 2020-01-19 17:09 GMT

ಮೈಸೂರು,ಜ.19: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಡಲು ಏನೂ ಕೆಲಸವಿಲ್ಲ. ಏನೇನೋ ಮಾತನಾಡುತ್ತಾರೆ. ಹಾಗಾಗಿ ಅವರು ಸಿನಿಮಾ ಮಾಡಿಕೊಂಡು ಇದ್ದರೆ ಒಳ್ಳೆಯದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ರವಿವಾರ ಬೆಳಗ್ಗೆ ಮೈಸೂರು ನಗರಕ್ಕೆ ಆಗಮಿಸಿದ ಅವರು, ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ನಂತರ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಕುಮಾರಸ್ವಾಮಿ ಟ್ವೀಟ್ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಅವರಿಗೆ ಭಾಷೆ ಮೇಲೆ ಹಿಡಿತವಿರಬೇಕು, ಅವರ ಸ್ಥಾನಕ್ಕೆ ತಕ್ಕಂತೆ ಪದ ಬಳಕೆ ಮಾಡಬೇಕು. ಇಷ್ಟು ಮಾತ್ರ ನಾನು ಹೇಳಬಲ್ಲೆ. ಅವರು ಸಿನಿಮಾ ಮಾಡಿಕೊಂಡು ಇದ್ದರೆ ಒಳ್ಳೆಯದು ಎಂದು ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯವರು ದೇಶಾದ್ಯಂತ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಅಂಥವರ ವಿರುದ್ಧ ಹಗುರವಾಗಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭಾಷೆ ಮೇಲೆ ಹಿಡಿತವಿರುಬೇಕು. ಕುಮಾರಸ್ವಾಮಿ ಅಧಿಕಾರದಿಂದ ದೂರ ಉಳಿದ ಬಳಿಕ ಅವರಿಗೆ ಉದ್ಯೋಗವಿಲ್ಲದಂತಾಗಿದೆ ಎಂದು ಹೇಳಿದರು.

ಎಸ್‍ಡಿಪಿಐ ಹಾಗೂ ಪಿಎಫ್‍ಐ ನಿಷೇಧದ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಕೇರಳದಿಂದ ಬಂದು ಪಾಕಿಸ್ಥಾನಕ್ಕೆ ಜೈ ಎಂದು ಘೊಷಣೆ ಕೂಗಿದ್ದನ್ನು ನಾವು ನೋಡಿದ್ದೇವೆ. ಕೊಲೆ ಮಾಡಿದ ಪ್ರಕರಣಗಳೂ ನಮ್ಮ ಮುಂದಿವೆ. ಇವೆಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಎಸ್‍ಡಿಪಿಐ ಹಾಗೂ ಪಿಎಫ್‍ಐ ಭಯೋತ್ಪಾದಕ ಸಂಘಟನೆಗಳು. ಅವುಗಳ ಚಟುವಟಿಕೆ ಏನು ಎಂಬುದು ಮೈಸೂರು, ಶಿವಮೊಗ್ಗದವರಿಗೂ ಅನುಭವ ಆಗಿದೆ. ಈ ಸಂಘಟನೆಗಳನ್ನು ನಿಷೇಧ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News