ಸಚಿವರಾಗಬೇಕೆಂದು ಕಾಯುತ್ತಿರುವವರ ಆಸೆ ಬೇಗ ಈಡೇರಲಿ: ಸತೀಶ್ ಜಾರಕಿಹೊಳಿ

Update: 2020-01-19 17:40 GMT

ಮೈಸೂರು,ಜ.19: ಕೆಲವರು ಒಂದು ವರ್ಷದಿಂದ ಸಚಿವರಾಗಬೇಕು ಎಂದು ಕಾಯುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಅದನ್ನು ಬೀಳಿಸಿ ಸಚಿವರಾಗಲು ಕಾಯುತ್ತಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ವಿದೇಶದಿಂದ ಬಂದ ಕೂಡಲೇ ಅವರ ಆಸೆ ಈಡೇರಲಿ ಎಂದು ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳ ಕುರಿತು ಮಾಜಿ ಸಚಿವ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.

ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕಾಗಿ ಕಾಯುವ ಪರಿಸ್ಥಿತಿ ಬರುತ್ತದೆ ಎಂದು ಮೊದಲೇ ಹೇಳಿದ್ದೆ. ಕೆಲವರು ಒಂದು ವರ್ಷದಿಂದ ಸಚಿವರಾಗಲು ಕಾಯುತ್ತಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬಂದ ದಿನದಿಂದ ಅದನ್ನು ಬೀಳಿಸಿ ಸಚಿವರಾಗಲು ಕಾಯುತ್ತಿದ್ದಾರೆ. ಅವರ ಆಸೆ ಬೇಗ ಈಡೇರಲಿ, ಅವರು ಬೇಗ ಸಚಿವರಾದರೆ ಒಳ್ಳೆಯದು. ಇದನ್ನೇ ನಾನು ಹಾರೈಸುತ್ತೇನೆ ಎಂದು ಹೇಳಿದರು.

ಜಾತಿ ಮತ್ತು ಪ್ರದೇಶವಾರು ಸಮತೋಲನ ಮಾಡುವುದಕ್ಕಾಗಿ ಕೆಪಿಸಿಸಿಗೆ ನಾಲ್ಕು ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಗೆ ಚಿಂತನೆ ನಡೆದಿದೆ ಎಂದು ಅವರು ಹೇಳಿದರು.

ಇನ್ನು ಒಂದು ವಾರದಲ್ಲಿ ಎಲ್ಲವೂ ಸರಿಯಾಗಲಿದೆ. ದಿಲ್ಲಿ ಚುನಾವಣೆ  ಹಿನ್ನಲೆಯಲ್ಲಿ ವಿಳಂಬ ಆಗಿದೆ. ಕಾಂಗ್ರೆಸ್‍ನಲ್ಲಿ ಮೂಲ, ವಲಸಿಗ ಎಂಬ ಪ್ರಶ್ನೆಯೇ ಇಲ್ಲ, ನಾವು ಪಕ್ಷ ಸೇರಿ 10 ವರ್ಷವಾಗಿದೆ. ಈಗ ಆ ವಿಚಾರವೂ ಚರ್ಚೆಗೆ ಅನಗತ್ಯ. ವಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ಅಧ್ಯಕ್ಷ ಒಂದೇ ಇರಲಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News