ಅಗ್ರಿ ಗೋಲ್ಡ್ ಕಂಪೆನಿಯ ಸ್ಥಿರ, ಚರ ಆಸ್ತಿಗಳ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ: ಹೈಕೋರ್ಟ್‌ಗೆ ಹೇಳಿಕೆ

Update: 2020-01-19 17:49 GMT

ಬೆಂಗಳೂರು, ಜ.19: ಅಗ್ರಿ ಗೋಲ್ಡ್ ಕಂಪೆನಿಯಿಂದ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿಯ ಎಲ್ಲ ಸ್ಥಿರ, ಚರ ಆಸ್ತಿಗಳನ್ನು ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯಿದೆ 2004ರ ಅನ್ವಯ ಸ್ವಾಧೀನಪಡಿಸಿಕೊಂಡಿದ್ದು, ಆ ಆಸ್ತಿಗಳ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ. 

ಮಂಗಳೂರಿನ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರಕಾರಿ ಪರ ವಕೀಲರು ವಾದಿಸಿ, ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯಿದೆ- 2004 ಅನ್ವಯ ಈಗಾಗಲೇ ಎಲ್ಲ ಆಸ್ತಿಗಳನ್ನು ವಶಕ್ಕೆ ಪಡೆದು ಕಂದಾಯ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸಲಾಗಿದೆ. ಆ ಸ್ವತ್ತುಗಳಲ್ಲಿ ಬೋರ್ಡ್‌ಗಳನ್ನು ಹಾಕಲಾಗಿದೆ. ಆಸ್ತಿ ಮಾರಾಟಕ್ಕೆ ಸಕ್ಷಮ ನ್ಯಾಯಾಲಯದ ಮುಂದೆ ಅರ್ಜಿಯನ್ನೂ ಸಲ್ಲಿಸಲಾಗಿದೆ. ಜತೆಗೆ ಕಾಯಿದೆಯ ನಿಯಮದಂತೆ ಬ್ಯಾಂಕ್ ಖಾತೆಯನ್ನೂ ತೆರೆಯಲಾಗಿದೆ ಎಂದರು.

ಹೇಳಿಕೆಯನ್ನು ಮಾನ್ಯ ಮಾಡಿದ ನ್ಯಾಯಪೀಠ, ವಂಚನೆ ಪ್ರಕರಣದಲ್ಲಿ ಬಹುತೇಕ ಜನರು ತೊಂದರೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಸಕ್ಷಮ ನ್ಯಾಯಾಲಯ ಆಸ್ತಿ ಮಾರಾಟಕ್ಕೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಆದ್ಯತೆಯ ಮೇಲೆ ವಿಚಾರಣೆ ನಡೆಸಬೇಕು ಎಂದು ಆದೇಶಿಸಿತು. ಅಲ್ಲದೆ, ರಾಜ್ಯ ಸರಕಾರ ಈ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಫೆ.14ರೊಳಗೆ ವಸ್ಥು ಸ್ಥಿತಿ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News