ದೇವೇಗೌಡರಿಗಾಗಿ ರಾಜ್ಯಸಭಾ ಸ್ಥಾನ ತ್ಯಾಗಕ್ಕೆ ಸಿದ್ಧ: ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ

Update: 2020-01-19 17:53 GMT

ಬೆಂಗಳೂರು, ಜ.19: ರಾಜ್ಯದ ಧ್ವನಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಂಸತ್‌ಗೆ ಹೊಗಬೇಕೆಂದು ನನ್ನ ಆಶಯ. ಒಂದು ವೇಳೆ ಅವರು ರಾಜ್ಯಸಭೆಗೆ ಹೊಗಲು ಒಪ್ಪಿದರೆ ನಾನು ತ್ಯಾಗ ಮಾಡಲು ಸಿದ್ದನಿದ್ದೇನೆಂದು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ತಿಳಿಸಿದ್ದಾರೆ.

ರವಿವಾರ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಅತ್ಯಂತ ಸಂತೋಷದಿಂದಲೇ ರಾಜ್ಯಸಭಾ ಸ್ಥಾನವನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ಇದರಿಂದ ನನಗೇನು ಬೇಸರ ವಿಲ್ಲವೆಂದು ತಿಳಿಸಿದರು.

ಜಿಲ್ಲಾ ಮಟ್ಟದ ಸಭೆ: ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಕನಿಷ್ಟ 70 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದ್ದು, ಈಗಿನಿಂದಲೆ ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಟಿಕೆಟ್ ಆಕಾಂಕ್ಷಿಗಳು ನಾಳೆಯಿಂದ ಒಂದು ತಿಂಗಳೊಳಗೆ ಅರ್ಜಿ ಸಲ್ಲಿಸಬಹುದು. ಅರ್ಹತೆಯ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಪ್ರತಿ ವಾರ್ಡ್‌ನಲ್ಲೂ ಜೆಡಿಎಸ್ ಕಚೇರಿ ತೆರೆಯಲು ವಾರ್ಡ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದೇವೆ. ವಾರ್ಡ್ ಮಟ್ಟದಲ್ಲಿ ಪಕ್ಷ ಸದೃಢ ಮಾಡಲು ಇವತ್ತಿನಿಂದಲೇ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು. ಜೆಡಿಎಸ್‌ನ ಜಾತ್ಯಾತೀತ ವೌಲ್ಯಗಳನ್ನು ಜನತೆಗೆ ತಿಳಿಸುವಂತಹ ಕೆಲಸವಾಗಬೇಕೆಂದು ಅವರು ಹೇಳಿದರು.

ಸಭೆಯಲ್ಲಿ ಬೆಂಗಳೂರು ನಗರ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಮಹಿಳಾ ವಿಭಾಗ, ಅಲ್ಪಸಂಖ್ಯಾತ ವಿಭಾಗ, ಕಾರ್ಮಿಕ ವಿಭಾಗದ ಅಧ್ಯಕ್ಷರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಿದ್ದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜೆಡಿಎಸ್ ವತಿಯಿಂದ ಜ.24ರಂದು ನಗರದ ಪುರಭವನದ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.

-ಕುಪೇಂದ್ರ ರೆಡ್ಡಿ, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News