ದೇಶದಲ್ಲಿ ಮೊದಲು ನಿಷೇಧ ಆಗಬೇಕಿರುವುದು ಆರೆಸ್ಸೆಸ್ ಮತ್ತು ಬಿಜೆಪಿ: ಎಸ್‍ಡಿಪಿಐ ನಾಯಕ ಅಬ್ದುಲ್ ಮಜೀದ್

Update: 2020-01-19 18:48 GMT

ಮೈಸೂರು,ಜ.19: ಈ ದೇಶದಲ್ಲಿ ಮೊಟ್ಟಮೊದಲಿಗೆ ನಿಷೇಧ ಮಾಡಬೇಕಿರುವ ಸಂಘಟನೆ ಯಾವುದಾದರು ಇದೆ ಎಂದರೆ ಆರೆಸ್ಸೆಸ್ ಮತ್ತು ಬಿಜೆಪಿ ಎಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳ ನಿಷೇಧ ಸಂಬಂಧ ಚಿಂತಿನೆ ನಡೆಸುತ್ತಿರುವ ಹಿನ್ನಲೆಯಲ್ಲಿ 'ವಾರ್ತಾಭಾರತಿ' ಅವರನ್ನು ಮಾತನಾಡಿಸಿದಾಗ ಈ ಮೇಲಿನಂತೆ ಪ್ರತಿಕ್ರಿಯಿಸಿದರು. 'ಯಾವುದೇ ಒಂದು ಸಂಘಟನೆ ಮತ್ತು ಪಕ್ಷವನ್ನು ನಿಷೇಧ ಮಾಡುವ ಮುನ್ನ ಆ ಪಕ್ಷಗಳು ಮತ್ತು ಸಂಘಟನೆ ವಿರುದ್ಧ ಎಷ್ಟು ಪ್ರಕರಣಗಳು ಸಾಬೀತಾಗಿದೆ ಎಂದು ನೋಡಬೇಕು. ಒಂದು ಪಕ್ಷ ಅಥವಾ ಸಂಘಟನೆಗಳ ವಿರುದ್ಧ ಯಾರು ಏನು ಬೇಕಾದರೂ ಆರೋಪಗಳನ್ನು ಮಾಡುತ್ತಾರೆ. ಆದರೆ ಎಷ್ಟು ಪ್ರಕರಣಗಳಲ್ಲಿ ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿದೆ ಎಂಬುದನ್ನು ನೋಡಬೇಕು, ಅದನ್ನು ಬಿಟ್ಟು ಇವರ ಹುಳುಕನ್ನು ಮುಚ್ಚಿಕೊಳ್ಳಲು ಮತ್ತು ಜನರ ದೃಷ್ಟಿಯನ್ನು ಬೇರೆಡೆ ಸೆಳೆಯಲು ಒಂದು ಪಕ್ಷ ಮತ್ತು ಸಂಘಟನೆಯನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧ ಜನರು ದಂಗೆ ಎದ್ದಿದ್ದಾರೆ. ಇದರ ವಿರುದ್ಧ ಒಂದು ಜನಾಂದೋಲನೇ ಸೃಷ್ಟಿಯಾಗಿದೆ. ಇವರ ಹುಳುಕುಗಳು ಬೆತ್ತಲೆಗೊಂಡಿವೆ. ಇದನ್ನು ಡೈವರ್ಟ್ ಮಾಡಲು ಇವರ ಏಜೆಂಟ್‍ಗಳಂತೆ ವರ್ತಿಸುತ್ತಿರುವ ಕೆಲವು ಪೊಲೀಸರನ್ನು ಬಳಸಿಕೊಂಡು ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ದೇಶದಲ್ಲಿ ಮೊಟ್ಟಮೊದಲಿಗೆ ಬ್ಯಾನ್ ಆಗ ಬೇಕಿರುವುದು ಆರೆಸ್ಸೆಸ್ ಮತ್ತು ಬಿಜೆಪಿ, ಈ ದೇಶದ ಹೆಸರಾಂತ ಪ್ರಗತಿಪರ ಚಿಂತಕರು ಮತ್ತು ಸಾಹಿತಿಗಳಾದ ಪನ್ಸಾರೆ, ಗೌರಿ ಲಂಕೇಶ್, ಎಂ.ಎಂ.ಕಲ್ಬುರ್ಗಿ ಅವರನ್ನು ಕೊಂದವರು ಯಾರು? ಇವರನ್ನು ಮತ್ತು ಈ ಸಂಘಟನೆಗಳನ್ನು ಏಕೆ ನಿಷೇಧ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.

ಮಂಗಳೂರಿನಲ್ಲಿ ಚರ್ಚ್‍ಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದವರು ಯಾರು? ಮಹಾತ್ಮಾ ಗಾಂಧೀಜಿ ಕೊಲೆ ಸೇರಿದಂತೆ ಇಲ್ಲಿಯವರೆಗೆ 19 ಸಾವಿರ ಕೋಮುಗಲಭೆಗೆ ಆರೆಸ್ಸೆಸ್ ಮತ್ತು ಭಜರಂಗದಳ  ಕಾರಣರಾಗಿದ್ದಾರೆ. ಇದರಲ್ಲಿ ಮುಸ್ಲಿಮರು, ದಲಿತರನ್ನು ಬಹುದೊಡ್ಡ ಸಂಖ್ಯೆಯಲ್ಲಿ ಕೊಲೆ ಮಾಡಿದ್ದಾರೆ. ಗುಜರಾತ್ ನಲ್ಲಿ ಎರಡು ಸಾವಿರ ಮುಸ್ಲಿಮರನ್ನು ಕೊಂದರಲ್ಲ, ಅವರನ್ನು ನಿಷೇಧ ಮಾಡಿದರಾ ? ಅಲ್ಲಿನ ಮಂತ್ರಿ ಮಾಯಾ ಕೊಲ್ಲಾನಿ ಸಾಕಷ್ಟು ಪ್ರಕರಣ ಎದುರಿಸುತ್ತಿದ್ದಾರೆ, ಅವರು ಬೇಲ್ ಪಡೆದು ಹೊರಗಿದ್ದಾರೆ. ಮಾಲೆಂಗಾವ್ ಸ್ಫೋಟದಲ್ಲಿ ಸಾದ್ವಿ ಪ್ರಜ್ಞಾ ಸಿಂಗ್ ಆರೋಪಿ, ಆಕೆ ಸಂಸದೆ, ಸಂಜಾತ ಬಾಂಬ್ ಸ್ಫೋಟ, ಅಜ್ಮೀರ್ ಬಾಂಬ್ ಸ್ಫೋಟ ಮಾಡಿದವರು ಯಾರು? ಹುಬ್ಬಳ್ಳಿ ಕೋರ್ಟ್ ಬಾಂಬ್ ಸ್ಫೋಟಕ್ಕೆ ಯಾರು ಕಾರಣ? ಇದನ್ನು ಮಾಧ್ಯಮಗಳು ಮೊದಲು ಬಹಿರಂಗ ಪಡಿಸಬೇಕು ಮತ್ತು ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.

ದೆಹಲಿಯಲ್ಲಿ ರಾಷ್ಟ್ರಪತಿ ಪದಕ ಪಡೆದ ದವೇಂದರ್ ಸಿಂಗ್ ಎಂಬ ಡಿವೈಎಸ್ಪಿ ಭಯೋತ್ಪಾಧಕ ಚಟುವಟಿಕೆ ಮಾಡಿಸಲು ಉಗ್ರಗಾಮಿಗಳನ್ನು ಜೊತೆಯಲ್ಲಿ ಕರೆದುಕೊಂಡು ಬರುತ್ತಿದ್ದರು ಎಂಬ ಆರೋಪ ಇದೆ. ಒಬ್ಬ ಕೆಟ್ಟ ಡಿವೈಎಸ್ಪಿ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾದರೆ ಇಡೀ ಪೊಲೀಸ್ ಇಲಾಖೆಯನ್ನು ಹೊಣೆ ಮಾಡಲು ಸಾಧ್ಯವೆ? ಎಂದು ಪ್ರಶ್ನಸಿದರು. ಹಾಗಾಗಿ ಯಾವುದೇ ಪಕ್ಷದಲ್ಲಿ ಯಾರಾದರೂ ತಪ್ಪು ಮಾಡಿದರೆ ಅದಕ್ಕೆ ಪಕ್ಷ ಅಥವಾ ಸಂಘಟನೆ ಹೊಣೆಯಲ್ಲ, ಯಾರು ತಪ್ಪು ಮಾಡಿರುತ್ತಾರೊ ಅವರ ವಿಚಾರಣೆ ನಡೆಸಬೇಕು ಅಪರಾಧಿ ಎಂದು ಕಂಡು ಬಂದರೆ ಶಿಕ್ಷೆಯಾಗಬೇಕಿರುವುದು ಈ ನೆಲದ ಕಾನೂನು. ಅದು ಬಿಟ್ಟು ಇಂತಹ ಸಂದರ್ಭ ಎದುರಾದಾಗ ಯಾಕೆ ಎಸ್‍ಡಿಪಿಐ ಪಕ್ಷವನ್ನು ಗುರಿಯಾಗಿಸುತ್ತಾರೆ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಚಕ್ರವರ್ತಿ ಸೂಲಿಬೆಲೆ ಮತ್ತು ತೇಜಸ್ವಿ ಸೂರ್ಯ ಅವರನ್ನು ಬಳಸಿಕೊಂಡು ಹೀರೋ ಮಾಡಲು ಹೊರಟಿದ್ದಾರೆ. ಸಿಎಎ ಮತ್ತು ಎನ್‍ಆರ್‍ಸಿ ವಿಚಾರವನ್ನು ಮರೆ ಮಾಚಿ ಜನರ ಬಳಿ ಸಿಂಪಥಿ ಗಿಟ್ಟಿಸಿಕೊಳ್ಳಲು ಬಿಜೆಪಿ ಇಂತಹ ತಂತ್ರವನ್ನು ಮಾಡುತ್ತಿದೆ. ತಪ್ಪು ಯಾರು ಮಾಡಿದ್ದಾರೋ ಅವರ ಮೇಲೆ ಕ್ರಮಜರುಗಿಸಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News