ಕಲಬುರಗಿ: ಪೌರತ್ವ ವಿರೋಧಿ ಪಾದಯಾತ್ರೆಗೆ ಪೊಲೀಸರಿಂದ ಅಡ್ಡಿ; ಆರೋಪ

Update: 2020-01-20 12:25 GMT
ಸಾಂದರ್ಭಿಕ ಚಿತ್ರ

ಕಲಬುರಗಿ: ಸಿಎಎ, ಎನ್‌ಆರ್‌ಸಿ ಮತ್ತು ಎನ್.ಪಿ.ಆರ್ ವಿರೋಧಿಸಿ ನಾಳೆ ಕಲಬುರಗಿಯ ಪೀರ್ ಬಂಗಾಲಿ ಮೈದಾನದಲ್ಲಿ ಜನಾಂದೋಲನ ಸಮಾವೇಶ ಹಮ್ಮಿಕೊಳಲಾಗಿದ್ದು, ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸಿ, ಭಾಗವಹಿಸಲು ಸುರಪುರ ತಾಲೂಕಿನಿಂದ ಸುಮಾರು 100 ಮಂದಿ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದ ಹೋರಾಟಗಾರರನ್ನು ಜೇವರ್ಗಿ ಪೊಲೀಸರು ಅಡ್ಡಿ ಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಜ.19ರಂದು ಸುರಪುರದಿಂದ ಹೊರಟಿರುವ ಪಾದಯಾತ್ರೆ ಇಂದು ಜೇವರ್ಗಿ ಹತ್ತಿರದ ಕ್ಯಾನಲ್ ಸಮಿಪ ತಲುಪಿದ್ದು, ಬೆಳಗ್ಗೆ ಪಾದ ಯಾತ್ರೆ ಪ್ರಾರಂಭವಾದಾಗ ಪಾದಯಾತ್ರೆಗೆ ಅನುಮತಿ ಇಲ್ಲ ಹಾಗೂ ಭದ್ರತೆ ವ್ಯವಸ್ಥೆ ಇಲ್ಲದಿರುವುದರಿಂದ ಪಾದಯಾತ್ರೆಗೆ ತೆರಳಲು ಅನುಮತಿ ಇಲ್ಲ, ಸುರಪುರಕ್ಕೆ ವಾಪಸ್ ತೆರಳಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆಂದು ಪಾದ ಯಾತ್ರೆಯಲ್ಲಿ ಭಾಗವಹಿಸಿದ ದಾವೂದ್ ಪಾಠಾನ್ ಸುರಪುರ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ರೈತ ಮುಖಂಡ, ಪೀಪಲ್ಸ್ ಫೋರಂ ಸದಸ್ಯ ಮಾರುತಿ ಮಾನ್ಪಡೆ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಪಾದಯಾತ್ರೆಗೆ ಅವಕಾಶ ಮಾಡಿಕೊಡಬೇಕೆಂದು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆಯಲ್ಲಿ ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ನಂತರ ಪೊಲೀಸರು ಪಾದಯಾತ್ರೆಗೆ ಅನುಮತಿ ನೀಡಿದರು ಎಂದು ತಿಳಿದು ಬಂದಿದೆ. ಹೋರಾಟಗಾರರು ಇಂದು ಫಿರೋಜಾಬಾದ್ ದರ್ಗಾದಲ್ಲಿ ವಾಸ್ತವ್ಯ ಮಾಡಲಿದ್ದು, ನಾಳೆ 12 ಗಂಟೆ ವೇಳೆ ಪೀರ್ ಬಂಗಾಲಿ ಮೈದಾನಕ್ಕೆ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.

ಅನುಮತಿಯ ನೆಪ ಒಡ್ಡಿ ಪಾದಯಾತ್ರೆ ತಡೆಯುವುದು ಸೂಕ್ತವಲ್ಲ. ಪೊಲೀಸರ ಈ ಕ್ರಮ ಖಂಡನೀಯ

-ಮಾರುತಿ ಮಾನ್ಪಡೆ, ರೈತ ಮುಖಂಡ ಹಾಗೂ ಜನಾಂದೋಲ ಸಮಾವೇಶದ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News