ಮಂಗಳೂರಿನಲ್ಲಿ 'ಸ್ಫೋಟಕ' ಪತ್ತೆ ಪ್ರಕರಣ: ಸಮಗ್ರ ತನಿಖೆಗೆ ಗೃಹ ಸಚಿವ ಬೊಮ್ಮಾಯಿ ಸೂಚನೆ

Update: 2020-01-20 14:00 GMT

ಹಾವೇರಿ, ಜ. 20: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿ ರಿಕ್ಷಾದಲ್ಲಿ ಬಂದು, ಬ್ಯಾಗ್ ಇರಿಸಿದ್ದ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಪತ್ತೆಯಾಗಿದ್ದು, ಈ ಸಂಬಂಧ ತನಿಖೆಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸೋಮವಾರ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿ ಬಳಿಯ ಜಾನಪದ ವಿಶ್ವ ವಿದ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಳಿ ಇರಿಸಿದ್ದ ಸಂಶಯಾಸ್ಪದ ಬ್ಯಾಗನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಅದರಲ್ಲಿ ಸಜೀವ ಸ್ಫೋಟಕ ಇರುವುದು ಕಂಡು ಬಂದಿದೆ. ಇದರ ಹಿಂದೆ ಯಾರಿದ್ದಾರೆಂಬುದನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮಂಗಳೂರನ್ನು ಭಯೋತ್ಪಾದನಾ ಚಟುವಟಿಕೆ ತಾಣ ಎಂದು ಗುರುತಿಸಲಾಗಿದೆ. ದೇಶದ ಆರ್ಥಿಕ ಚಟುವಟಿಕೆಗಳಿಗೆ ಭಂಗ ತರುವ ಕೃತ್ಯವಿದು. ಇದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ಸ್ಪಷ್ಟನೆ ನೀಡಿದರು.

ಜ.26ರ ಗಣರಾಜೋತ್ಸವ ಸಂದರ್ಭದಲ್ಲಿ ದೇಶ ಹಾಗೂ ರಾಜ್ಯದಲ್ಲಿ ಈ ರೀತಿ ವಿಧ್ವಂಸಕ ಕೃತ್ಯಕ್ಕೆ ಭಯೋತ್ಪಾದಕರು ಪ್ರಯತ್ನ ನಡೆಸುತ್ತಲೆ ಬಂದಿದ್ದಾರೆ. ಅದನ್ನು ನಮ್ಮ ಪೊಲೀಸರು ವಿಫಲಗೊಳಿಸುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ತಿಳಿಸಿದರು.

ಕಟ್ಟೆಚ್ಚರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಶಯಾಸ್ಪದ ಸ್ಫೋಟಕ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ವಿಮಾನ, ಬಸ್ಸು ಹಾಗೂ ರೈಲ್ವೆ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News