ಈ ಸಾಲಿನಲ್ಲಿ ಪಠ್ಯ ಪುಸ್ತಕಗಳಿಂದ 'ಟಿಪ್ಪು ಪಠ್ಯ' ತೆಗೆಯುವುದಿಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್

Update: 2020-01-20 14:08 GMT

ಬೆಂಗಳೂರು, ಜ.20: 2020-21 ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳು ಮುದ್ರಣಕ್ಕೆ ಸಿದ್ಧವಾಗಿರುವ ಹಿನ್ನೆಲೆಯಲ್ಲಿ, ಈ ಸಾಲಿನ ಪಠ್ಯಪುಸ್ತಕಗಳಿಂದ ಟಿಪ್ಪು ಕುರಿತ ಪಠ್ಯವನ್ನು ತೆಗೆಯುತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ನಗರದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ವಿಷಯವನ್ನು ಪಠ್ಯಪುಸ್ತಕದಿಂದ ತೆಗೆಯುವಂತೆ ಶಾಸಕ ಅಪ್ಪಚ್ಚು ರಂಜನ್ ಮನವಿ ಮಾಡಿದ್ದರು. ಈ ಕುರಿತು ಸಿಎಂ ಜತೆ ಚರ್ಚೆ ನಡೆಸಿ, ಸಮಿತಿಯೊಂದನ್ನು ನೇಮಕ ಮಾಡಲಾಗಿತ್ತು. ಆದರೆ, ಸಮಿತಿಯು ಇತಿಹಾಸದಲ್ಲಿರುವ ಅಂಶಗಳಷ್ಟೇ ಪಠ್ಯದಲ್ಲಿ ಇವೆ ಎಂದು ಹೇಳಿದೆ ಎಂದರು.

ಈಗಾಗಲೇ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಧಿ ಆರಂಭದ ಮೊದಲ ದಿನವೇ ಪಠ್ಯಪುಸ್ತಕ ಮತ್ತು ಸಮವಸ್ತ್ರ ನೀಡಲು ತೀರ್ಮಾನಿಸಲಾಗಿದೆ. ಹೀಗಾಗಿ, ಪಠ್ಯಪುಸ್ತಕಗಳನ್ನು ಮುದ್ರಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಟಿಪ್ಪು ಪಠ್ಯವನ್ನು ಮುಂದಿನ ಶೈಕ್ಷಣಿಕ ಸಾಲಿಗೆ ಮುಂದುವರಿಯಲಿದೆ. ಅನಂತರ ಈ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಶಾಸಕ ಅಪ್ಪಚ್ಚು ರಂಜನ್ ಟಿಪ್ಪುವಿನ ಕುರಿತಾದ ಹಲವು ದಾಖಲೆಗಳನ್ನು ನೀಡಿದ್ದಾರೆ. ಈ ಕುರಿತು ಮತ್ತೊಂದು ಸಮಿತಿ ರಚನೆ ಮಾಡಲಾಗುವುದು. ಆ ಸಮಿತಿಯಲ್ಲಿನ ತಜ್ಞರು ಸುದೀರ್ಘವಾದ ಅಧ್ಯಯನ ನಡೆಸಬೇಕಿದೆ. ಅದು ವಿಸ್ತೃತ ವರದಿ ಸಲ್ಲಿಸಿದ ಬಳಿಕ ಟಿಪ್ಪು ಪಠ್ಯವನ್ನು ಯಾವುದು ಇರಬೇಕು, ಯಾವುದು ಇರಬಾರದು ಎಂಬುದು ನಿರ್ಧಾರ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News