ಮಂಗಳೂರಿನಲ್ಲಿ 'ಸ್ಫೋಟಕ' ಪತ್ತೆ ಪ್ರಕರಣ: ರಾಜ್ಯ ರಾಜಧಾನಿ ಸೇರಿ ಹಲವು ಕಡೆ ಕಟ್ಟೆಚ್ಚರ

Update: 2020-01-20 16:12 GMT

ಬೆಂಗಳೂರು, ಜ.20: ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಸ್ಫೋಟಕ' ಪತ್ತೆಯಾದ ಹಿನ್ನೆಲೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ.

ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಕಲಬುರ್ಗಿ ಸೇರಿದಂತೆ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ. ಜತೆಗೆ ವಿಧಾನಸೌಧ, ವಿಕಾಸ ಸೌಧ, ಮೆಟ್ರೋ, ಹೈಕೋರ್ಟ್, ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಪ್ರಮುಖ ಸ್ಥಳಗಳ ಪ್ರವೇಶದ್ವಾರವೂ ಸೇರಿದಂತೆ ಎಲ್ಲ ಕಡೆ ಶ್ವಾನದಳ, ಬಾಂಬ್ ಪತ್ತೆ ದಳದ ಸಿಬ್ಬಂದಿಯಿಂದ ತಪಾಸಣೆ ಹೆಚ್ಚಿಸಲಾಗಿದೆ. ಪ್ರಯಾಣಿಕರು ಮತ್ತು ಅವರ ಜೊತೆ ಬರುವವರ ಚಲನವಲನಗಳ ಮೇಲೆ ನಿಗಾವಹಿಸಲಾಗಿದೆ ಎಂದು ಭದ್ರತೆಯ ಉಸ್ತುವಾರಿ ವಹಿಸಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಅನುಮಾನಾಸ್ಪದ ವಸ್ತುಗಳನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರಯಾಣಿಕರ ಬಳಿ ಇರುವ ಬ್ಯಾಗ್, ಲಗೇಜುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಐಎಸ್‌ಎಫ್), ಕರ್ನಾಟಕ ಪೊಲೀಸ್ ಹಾಗೂ ಖಾಸಗಿ ಸಿಬ್ಬಂದಿ ಸೇರಿದಂತೆ 150ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

‘ಬಿಗಿ ಭದ್ರತೆ’

ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಭದ್ರತೆ ಒದಗಿಸಲಾಗಿದೆ. ಮೆಟ್ರೋ, ಬಸ್ ನಿಲ್ದಾಣ, ಮಾಲ್ ಗಳಲ್ಲಿಯೂ ಎಲ್ಲ ರೀತಿಯ ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News